ಕುವೈಟ್ ಸ್ಫೋಟ: ಮೃತರ ಪೈಕಿ ಇಬ್ಬರು ಭಾರತೀಯರು

ಕುವೈಟ್‍ನ ಶಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 26 ಮಂದಿಯ ಪೈಕಿ ಇಬ್ಬರು ಭಾರತೀಯರೂ ಸೇರಿದ್ದಾರೆ...
ಮಸೀದಿಯಲ್ಲಿ ನಡೆದ ದಾಳಿಯಲ್ಲಿ ಮೃತರಾದವರ ಶವಸಂಸ್ಕಾರದ ವೇಳೆ ರೋದಿಸುತ್ತಿರುವ ಸಂಬಂಧಿಕರು (ಕೃಪೆ: ರಾಯಿಟರ್ಸ್)
ಮಸೀದಿಯಲ್ಲಿ ನಡೆದ ದಾಳಿಯಲ್ಲಿ ಮೃತರಾದವರ ಶವಸಂಸ್ಕಾರದ ವೇಳೆ ರೋದಿಸುತ್ತಿರುವ ಸಂಬಂಧಿಕರು (ಕೃಪೆ: ರಾಯಿಟರ್ಸ್)

ಕುವೈಟ್ ಸಿಟಿ/ಬ್ರಿಟನ್: ಕುವೈಟ್‍ನ ಶಿಯಾ ಮಸೀದಿಯಲ್ಲಿ ಶುಕ್ರವಾರ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 26 ಮಂದಿಯ ಪೈಕಿ ಇಬ್ಬರು ಭಾರತೀಯರೂ ಸೇರಿದ್ದಾರೆ.

ಈ ಬಗ್ಗೆ ಭಾನುವಾರ ಮಾಹಿತಿ ನೀಡಿರುವ ಭಾರತೀಯ ರಾಯಭಾರ ಕಚೇರಿ, ಕುವೈಟ್‍ನಲ್ಲಿರುವ ಭಾರತೀಯರು ತಮ್ಮ ಸುರಕ್ಷೆ ಹಾಗೂ ಭದ್ರತೆ ಬಗ್ಗೆ ಎಚ್ಚರ ವಹಿಸುವಂತೆ ಸೂಚಿಸಿದೆ. ಶುಕ್ರವಾರ ಮಧ್ಯಾಹ್ನ ನಮಾಜ್ ನ ವೇಳೆ ಐಸಿಸ್ ಉಗ್ರರು ಮಸೀದಿಯಲ್ಲಿ ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಉತ್ತರಪ್ರದೇಶದ ರಿಜ್ವಾನ್ ಹುಸೇನ್ (31) ಮತ್ತು ಇಬ್ನ್ ಅಬ್ಬಾಸ್(25) ಮೃತಪಟ್ಟಿದ್ದಾರೆ.

ಅವರ ಕುಟುಂಬ ಸದಸ್ಯರ ಇಚ್ಛೆಯಂತೆ ಅವರ ಅಂತ್ಯಸಂಸ್ಕಾರವನ್ನು ಇರಾಕ್‍ನ ಪವಿತ್ರ ನಜಾಫ್ ನಗರದಲ್ಲಿ ನಡೆಸಲಾಯಿತು ಎಂದು ರಾಯಭಾರ ಕಚೇರಿ ತಿಳಿಸಿದೆ. ಗಾಯಗೊಂಡವರಲ್ಲೂ ಅನೇಕ ಮಂದಿ ಭಾರತೀಯರು ಸೇರಿದ್ದು ರಾಯಭಾರಿ ಸುನಿಲ್ ಜೈನ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ. ಕುವೈಟ್‍ನಲ್ಲಿ ಸುಮಾರು 8 ಲಕ್ಷ ಭಾರತೀಯರಿದ್ದಾರೆ.

ಮತ್ತಷ್ಟು ದಾಳಿ ಸಾಧ್ಯತೆ:

ಇದೇ ವೇಳೆ, ಟ್ಯುನೀಷಿಯಾದ ಪ್ರವಾಸಿ ರೆಸಾರ್ಟ್‍ಗಳ ಮೇಲೆ ಐಸಿಸ್ ಉಗ್ರರು ಕಣ್ಣಿಟ್ಟಿದ್ದು, ಅಲ್ಲಿ ಇನ್ನಷ್ಟು ದಾಳಿಗಳು ನಡೆಯುವ ಸಾಧ್ಯತೆಯಿದೆ ಎಂದು ಬ್ರಿಟನ್ ಎಚ್ಚರಿಸಿದೆ.ಅಪರಿಚಿತ ವ್ಯಕ್ತಿಗಳಿಂದ ಹಾಗೂ ಸಾಮಾಜಿಕ ತಾಣಗಳ ಮೂಲಕ ಉಗ್ರರತ್ತ ಆಕರ್ಷಿತರಾದವರಿಂದ ದಾಳಿ ನಡೆಯಬಹುದು ಎಂದೂ ಹೇಳಿದೆ.

ಸೆಲ್ಫೀ ತೆಗೆದುಕೊಂಡಿದ್ದ ದಾಳಿಕೋರ:
ಫ್ರಾನ್ಸ್ ನಲ್ಲಿ ಫ್ಯಾಕ್ಟರಿಯೊಂದಕ್ಕೆ ನುಗ್ಗಿ ತನ್ನ ಬಾಸ್ ನ ಶಿರಚ್ಛೇದ ಮಾಡಿದ್ದ ಯಾಸಿನ್ ಸಾಲ್ಹಿ (35) ಕೊನೆಗೂ ತಪ್ಪೊಪ್ಪಿ ಕೊಂಡಿದ್ದಾನೆ ಎಂದು ತನಿಖಾಧಿಕಾರಿಗಳು ತಿಳಿಸಿ ದ್ದಾರೆ. ಕೃತ್ಯ ನಡೆಸಿದ ಬಳಿಕ ಈತ ಬಾಸ್‍ನ ಕತ್ತರಿಸಿದ ತಲೆಯೊಂದಿಗೆ ತನ್ನದೇ ಸೆಲ್ಫೀ ತೆಗೆದುಕೊಂಡಿದ್ದ. ನಂತರ ಅದನ್ನು ಕೆನಡಾದಲ್ಲಿರುವ ವಾಟ್ಸ್ ಅಪ್ ಸಂಖ್ಯೆಯೊಂದಕ್ಕೆ ಕಳುಹಿಸಿದ್ದ. ಈ ಫೋಟೋವನ್ನು ಆತನಿಗೆ ತೋರಿಸಿದ ಬಳಿಕ ಆತ ತಪ್ಪೊಪ್ಪಿಕೊಂಡ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com