ಮಹಾರಾಷ್ಟ್ರದಲ್ಲಿ ಎಚ್‌1ಎನ್‌1ಗೆ ಉಚಿತ ಚಿಕಿತ್ಸೆ

ಮಾರಕ ಎಚ್‌1ಎನ್‌1 ರೋಗಕ್ಕೆ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್...
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (ಸಂಗ್ರಹ ಚಿತ್ರ)
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ (ಸಂಗ್ರಹ ಚಿತ್ರ)

ಮುಂಬೈ: ಮಾರಕ ಎಚ್‌1ಎನ್‌1 ರೋಗಕ್ಕೆ ಮಹಾರಾಷ್ಟ್ರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಸೂಚಿಸಿದ್ದಾರೆ.

ದೇಶಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಹಂದಿ ಜ್ವರಕ್ಕೆ ಮಹಾರಾಷ್ಟ್ರದ ಜನತೆ ತತ್ತರಿಸಿ ಹೋಗಿದ್ದು, ಎಲ್ಲ ರೋಗಿಗಳಿಗೆ ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಹೇಳಿದ್ದಾರೆ.

ರಾಜ್ಯಾದ್ಯಂತದ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲಿ ಎಚ್‌1ಎನ್‌1 ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ಆರೋಗ್ಯ ಇಲಾಖೆ ಮೂಲಕ ಸೂಚಿಸಲಾಗಿದ್ದು, ಈ ನಿಟ್ಟಿನಲ್ಲಿ ಬರುವ ಎಲ್ಲ ಖರ್ಚುವೆಚ್ಚಗಳನ್ನು ಮಹಾರಾಷ್ಟ್ರ ಸರ್ಕಾರವೇ ಭರಿಸಲಿದೆ. ಖಾಸಗಿ ಆಸ್ಪತ್ರೆಗಳು ಹಂದಿ ಜ್ವರ ಕಾಯಿಲೆಯಿಂದ ಬಳಲುವವರಿಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳುವಂತಿಲ್ಲ . ಈ ಸಂಬಂಧ ತಗಲುವ ಎಲ್ಲ ಖರ್ಚುಗಳನ್ನು ಸರ್ಕಾರವೇ ಭರಿಸಲಿದೆ ಎಂದು ಫ‌ಡ್ನವೀಸ್‌ ಮಾಧ್ಯಮಗಳಿಗೆ ತಿಳಿಸಿದರು.

ಇನ್ನು ಮುಂಬೈನಾದ್ಯಂತ ಸುರಿಯುತ್ತಿರುವ ಅಕಾಲಿಕ ಮಳೆ ಸರ್ಕಾರಕ್ಕೆ ಮತ್ತಷ್ಟು ತಲೆನೋವು ತಂದಿದ್ದು, ಮಳೆಯಿಂದ ಎಚ್‌1ಎನ್‌1 ಹಂದಿ ಜ್ವರವು ಇನ್ನಷ್ಟು ಹೆಚ್ಚುವ ಭೀತಿ ಆವರಿಸಿದೆ. ರಾಜ್ಯದಲ್ಲಿನ ಶೇ.90ರಷ್ಟು ಎಚ್1ಎನ್1 ರೋಗಿಗಳು ಮುಂಬಯಿ, ಪುಣೆ, ನಾಗಪುರ, ಔರಂಗಾಬಾದ್‌ ಮತ್ತು ಲಾತೂರ್‌ನವರಾಗಿದ್ದಾರೆ. ಈ ಪ್ರದೇಶದಲ್ಲಿನ ದಿನದ ಉಷ್ಣಾಂಶ ಇದ್ದಕ್ಕಿಂದ್ದಂತೆಯೇ ಕುಸಿದಿದ್ದು, ಈ ಪ್ರದೇಶಗಳಲ್ಲಿ ಹಂದಿ ಜ್ವರ ಸೋಂಕು ಇನ್ನಷ್ಟು ವ್ಯಾಪಿಸುವ ಸಾಧ್ಯತೆ ಇದೆ.

ರಾಜ್ಯ ಆರೋಗ್ಯ ಇಲಾಖೆಯನ್ನು ಈ ನಿಟ್ಟಿನಲ್ಲಿ ಕಟ್ಟೆಚ್ಚರದಲ್ಲಿ ಇರಿಸಲಾಗಿದ್ದು, ಖಾಸಗಿ ಸಹಿತ ಎಲ್ಲ ಆಸ್ಪತ್ರೆಗಳಲ್ಲಿ ಎಲ್ಲ ಹಂದಿಜ್ವರ ರೋಗಿಗಳಿಗೆ, ಸೋಂಕು ತಗಲಿದವರಿಗೆ, ಉಚಿತವಾಗಿ ಚಿಕಿತ್ಸೆ ನೀಡುವಂತೆ ಆದೇಶಿಸಲಾಗಿದೆ ಎಂದು ಫ‌ಡ್ನವೀಸ್‌ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com