
ಮುಂಬೈ: 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದ್ದು, ಸಲ್ಮಾನ್ ಖಾನ್ ಡ್ರೈವಿಂಗ್ ಲೈಸೆನ್ಸ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕೆಂದು ಪ್ರಾಸಿಕ್ಯೂಷನ್ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
2002ರ ಹಿಟ್ ಅಂಡ್ ರನ್ ಪ್ರಕರಣದ ಸಮಯದಲ್ಲಿ ನಟ ಸಲ್ಮಾನ್ ಖಾನ್ ಅವರೇ ಕಾರನ್ನು ಚಲಾಯಿಸುತ್ತಿದ್ದರು. ಹೀಗಾಗಿ ಸಲ್ಮಾನ್ ಖಾನ್ ತಮ್ಮ ಚಾಲನಾ ಪರವಾನಗಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೆಷನ್ಸ್ ಕೋರ್ಟ್ ಗೆ ಪ್ರಾಸಿಕ್ಯೂಷನ್ ಮನವಿ ಮಾಡಿಕೊಂಡಿತ್ತು. ಆದರೆ ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿಡಬ್ಲ್ಯು ದೇಶಪಾಂಡೆ ಅವರು ಅರ್ಜಿಯನ್ನು ವಜಾಗೊಳಿಸಿದರು.
'ಪ್ರಾಸಿಕ್ಯೂಷನ್ ಅರ್ಜಿ ಇಂಡಿಯನ್ ಎವಿಡೆನ್ಸ್ ಕಾಯ್ದೆಯ ಅಡಿಯಲ್ಲಿ ಬರುವುದಿಲ್ಲ. ಹಾಗಾಗಿ ಆರೋಪಿ ಚಾಲನಾ ಪರವಾನಗಿಯನ್ನು ಸಲ್ಲಿಸಬೇಕೆಂದು ನ್ಯಾಯಾಲಯ ಬಲವಂತ ಮಾಡಲು ಬರುವುದಿಲ್ಲ. ಸೂಕ್ತವಾದ ಸಮಯದಲ್ಲಿ ಆರೋಪಿಯೇ ಸ್ವಇಚ್ಚೆಯಿಂದ ತನ್ನ ಲೈಸೆನ್ಸ್ ಅನ್ನು ಕೊಡಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ದಾಖಲೆಯನ್ನು ಸಲ್ಲಿಸಿ ಎಂದು ನಿರ್ದೇಶನ ನೀಡಲು ಸಾಧ್ಯವಿಲ್ಲ' ಎಂದು ನ್ಯಾಯಮೂರ್ತಿ ದೇಶಪಾಂಡೆ ಅವರು ಮೌಖಿಕವಾಗಿ ತಿಳಿಸಿದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಫೆಬ್ರವರಿ 27ರಂದು ಪರ ಮತ್ತು ಪ್ರತಿವಾದಿ ವಕೀಲರ ವಾದವನ್ನು ಆಲಿಸಿ, ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು.
2002 ಸೆಪ್ಚೆಂಬರ್ 28ರ ರಾತ್ರಿ ಬಾಂದ್ರಾದಲ್ಲಿ ನಟ ಸಲ್ಮಾನ್ ಖಾನ್ ಅವರ ಕಾರು ಫುಟ್ ಪಾತ್ ಮೇಲೆ ಚಲಿಸಿ ಅಲ್ಲಿ ಮಲಗಿದ್ದವರ ಮೇಲೆ ಹರಿದಿತ್ತು. ಈ ವೇಳೆ ಓರ್ವ ಮೃತಪಟ್ಟು ನಾಲ್ಕು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ನಟ ಸಲ್ಮಾನ್ ಖಾನ್ ವಿರುದ್ಧ ದೂರು ದಾಖಲಾಗಿದ್ದು, ಆರೋಪ ಸಾಬೀತಾದರೆ ನಟನಿಗೆ 10 ವರ್ಷ ಕಠಿಣ ಕಾರಾಗೃಹ ಸೆರೆವಾಸ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
Advertisement