ವಿಮೆ ವಿಧೇಯಕ ಮಂಡನೆ

ಪ್ರತಿಪಕ್ಷಗಳ ಗದ್ದಲದಿಂದಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭೂಸ್ವಾಧೀನ ವಿಧೇಯಕವು ಅರ್ಧದಾರಿಯಲ್ಲೇ ಬಾಕಿಯಾಗಿರುವ ನಡುವೆಯೇ ಮಂಗಳವಾರ ಲೋಕಸಭೆಯಲ್ಲಿ ವಿವಾದಿತ ವಿಮೆ ವಿಧೇಯಕ ಮಂಡನೆಯಾಗಿದೆ...
ಸಂಸತ್ ಭವನ
ಸಂಸತ್ ಭವನ

ನವದೆಹಲಿ: ಪ್ರತಿಪಕ್ಷಗಳ ಗದ್ದಲದಿಂದಾಗಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಭೂಸ್ವಾಧೀನ ವಿಧೇಯಕವು ಅರ್ಧದಾರಿಯಲ್ಲೇ ಬಾಕಿಯಾಗಿರುವ ನಡುವೆಯೇ ಮಂಗಳವಾರ ಲೋಕಸಭೆಯಲ್ಲಿ ವಿವಾದಿತ ವಿಮೆ ವಿಧೇಯಕ ಮಂಡನೆಯಾಗಿದೆ.

ಎಡಪಕ್ಷಗಳು ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ವಿಧೇಯಕ ಮಂಡಿಸಲಾಗಿದೆ. ವಿಮಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳವನ್ನು ಶೇ.26ರಿಂದ ಶೇ.49ಕ್ಕೇರಿಸುವ ವಿಮೆ ಕಾನೂನು (ತಿದ್ದುಪಡಿ) ವಿಧೇಯಕ, 2015 ಅನ್ನು ಹಣಕಾಸು ಸಹಾಯಕ ಸಚಿವ ಜಯಂತ್ ಸಿನ್ಹಾ ಮಂಡಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಡಪಕ್ಷಗಳು ಹಾಗೂ ಟಿಎಂಸಿ, ಇದೇ ವಿಧೇಯಕ ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಬಾಕಿಯಿರುವಾಗ ಲೋಕಸಭೆಯಲ್ಲಿ ವಿಧೇಯಕ ಮಂಡಿಸುವ ಅಧಿಕಾರ ಸರ್ಕಾರಕ್ಕಿಲ್ಲ ಎಂದವು.

ಇದಕ್ಕೆ ಪ್ರತಿಕ್ರಿಯಿಸಿದ ಸಿನ್ಹಾ, ಸುಗ್ರೀವಾಜ್ಞೆ ಹೊರಡಿಸಿದ 6 ವಾರಗಳೊಳಗೆ ವಿಧೇಯಕಕ್ಕೆ ಅಂಗೀಕಾರ ಪಡೆಯುವುದು ಸರ್ಕಾರದ ಜವಾಬ್ದಾರಿ. ಹಾಗಾಗಿ ವಿಧೇಯಕ ಮಂಡಿಸುತ್ತಿದ್ದೇವೆ ಎಂದರು.

ರಾಜ್ಯಸಭೆಯಲ್ಲಿ ವಿಮೆ ವಿಧೇಯಕವನ್ನು ಈ ಹಿಂದೆಯೇ ಮಂಡಿಸಲಾಗಿದೆ. ಅದನ್ನು ವಾಪಸ್ ಪಡೆಯಲು ಕಳೆದ ವಾರ ಸರ್ಕಾರ ಯತ್ನಿಸಿದರೂ ಪ್ರತಿಪಕ್ಷಗಳ ಗದ್ದಲದಿಂದಾಗಿ ಅದು ಸಾಧ್ಯವಾಗಿರಲಿಲ್ಲ.

ಅಧ್ಯಯನ ನಡೆಸಿ ನಿರ್ಧರಿಸುತ್ತೇನೆ
ಇದೇ ವೇಳೆ, ರಾಜ್ಯಸಭೆಯಲ್ಲಿ ಅಂಗೀಕಾರಕ್ಕೆ ಬಾಕಿಯಿರುವ ವಿಧೇಯಕವನ್ನು ಲೋಕಸಭೆಯಲ್ಲಿ ಮಂಡಿಸಬಹುದೇ ಎಂಬ ಬಗ್ಗೆ ಸಂಸದೀಯ ಕಾನೂನುಗಳನ್ನು ಅಧ್ಯಯನ ನಡೆಸಿ ನಿರ್ಧಾರ ಪ್ರಕಟಿಸುತ್ತೇನೆ ಎಂದು ರಾಜ್ಯಸಭೆ ಉಪಸಭಾಪತಿ ಪಿ.ಜೆ. ಕುರಿಯನ್ ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿ ತೀರ್ಪು ನೀಡುವ ಮೊದಲು ಸಂಸದೀಯ ನಿಯಮಗಳು ಮತ್ತು ಸಾಂವಿಧಾನಿಕ ನಿಬಂಧನೆಗಳನ್ನು ಅರಿತುಕೊಳ್ಳಬೇಕಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com