
ನವದೆಹಲಿ: ಅಷ್ಟಕ್ಕೂ ಬ್ರಿಟನ್ ಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ, `ಇಂಡಿಯಾಸ್ ಡಾಟರ್, ದಿ ಸ್ಟೋರಿ ಆಫ್ ಜ್ಯೋತಿ ಸಿಂಗ್' ಸಾಕ್ಷ್ಯಚಿತ್ರದಲ್ಲಿ ಇರುವ ಬಿರುಗಾಳಿ ಎಬ್ಬಿಸುವಂಥಾ ಸಂಗತಿಯಾದರೂ ಏನು?
ಸಾಕ್ಷ್ಯ ಚಿತ್ರದಲ್ಲಿ, ನಿರ್ಭಯಾ ಪ್ರಕರಣದ ಪ್ರಮುಖ ಅಪರಾಧ ಮುಕೇಶ್ ಸಿಂಗ್ ನೀಡಿರುವ ಹೇಳಿಕೆಗಳನ್ನು ಕೇಳಿದರೆ ಖಂಡಿತಾ ಎಂಥವರಲ್ಲೂ ಬೀಭತ್ಸ ಭಾವನೆ ಕೆರಳುತ್ತದೆ. ಮಾತ್ರವಲ್ಲ, ಭಾರತದ ಬಗ್ಗೆ, ಇಲ್ಲಿನ ಮನಸ್ಥಿತಿ ಬಗ್ಗೆಯೇ ಜಗತ್ತಿನೆದುರು ಪ್ರಶ್ನೆಗಳೇಳುತ್ತವೆ.
ಅಕ್ಷರಶಃ ಮೃಗಗಳಂತೆ ಅಸಹಾಯಕ ಯುವತಿಯೊಬ್ಬಳ ಮೇಲೆರಗಿ, ಆಕೆಗೆ ಚಿತ್ರಹಿಂಸೆ ನೀಡಿ ಕೊಂದ ಅಪರಾಧಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್‍ನ ಸಂದರ್ಶನವೇ ಸಾಕ್ಷ್ಯ ಚಿತ್ರದ ಪ್ರಮುಖ ಅಂಶ. ಈಗ ವಿವಾದಕ್ಕೆ ಕಾರಣವಾಗಿರುವುದೂ ಈತನ ಹೇಳಿಕೆಗಳೇ. ಸಾಕ್ಷ್ಯಚಿತ್ರ ತಂಡ ತಿಹಾರ್ ಜೈಲಿನೊಳಗೆ ಪ್ರವೇಶಿಸುತ್ತಿರುವುದು, ನಿರ್ಭಯಾಳನ್ನು ಕೊಂದ ರಾಕ್ಷಸರ ಚಲನವಲನಗಳು, ಚಟುವಟಿಕೆಗಳು ಕೂಡ ಇದರಲ್ಲಿ ಕಾಣಸಿಗುತ್ತದೆ. ಜೈಲಿನ ದೊಡ್ಡ ಗೇಟನ್ನು ತೆರೆದಾಗ ಹೊರಬರುವ ಮುಕೇಶ್, ನೇರವಾಗಿ ಮತ್ತೊಂದು ಕೊಠಡಿಯೊಳಗೆ ಬಂದು ಸ್ಟೂಲ್‍ವೊಂದರಲ್ಲಿ ಕೂರುತ್ತಾನೆ. ಅಲ್ಲಿಂದ ಶುರುವಾಗುತ್ತದೆ ಆತನ ಸಂದರ್ಶನ.
ಮುಖದಲ್ಲಿ ಪಶ್ಚಾತ್ತಾಪದ ಪುಟ್ಟ ಕಣವೂ ಇಲ್ಲದೆ ರಾಜಾ ರೋಷವಾಗಿ ತಾನು ಮತ್ತು ತನ್ನ ಸ್ನೇಹಿತರು ಮಾಡಿದ ಹೀನಾಯ ಕೃತ್ಯವನ್ನು ಆತ ವಿವರಿಸುತ್ತಾನೆ. ಡಿ.16ರ ಬೆಳಗ್ಗಿನಿಂದ ತಾವೇನೇನು ಮಾಡಿದೆವು ಎಂಬುದನ್ನು ಹೇಳುತ್ತ ಸಾಗುವ ಈತ, ಅಂದು ರಾತ್ರಿ ನಿರ್ಭಯಾಆಕೆಯ ಸ್ನೇಹಿತನೊಂದಿಗೆ ಬಸ್ ಹತ್ತಿದ್ದು, ಆ ಸ್ನೇಹಿತನ ಮೇಲೆ ಹಲ್ಲೆ ನಡೆಸಿದ್ದು, ನಿರ್ಭಯಾಳನ್ನು ಬಸ್‍ನ ಹಿಂಬದಿಯ ಸೀಟಿಗೆ ಎಳೆದೊಯ್ದಿದ್ದು, ಆಕೆಯ ಜನನಾಂಗದೊಳಕ್ಕೆ ಕೈಹಾಕಿ ಕರುಳನ್ನು ಹೊರಗೆಳೆದಿದ್ದು, ಸರಣಿ ಅತ್ಯಾಚಾರ ಎಸಗಿದ್ದು, ಅವರಿಬ್ಬರನ್ನೂ ಚಲಿಸುತ್ತಿರುವ ಬಸ್‍ನಿಂದ ಕೆಳಕ್ಕೆ ನೂಕಿದ್ದು, ಬಸ್‍ನಲ್ಲಿ ಹರಿದಿದ್ದ ರಕ್ತವನ್ನು ಸ್ವಚ್ಛಗೊಳಿಸಿದ್ದು... ಹೀಗೆ ಅಂದು ನಡೆದ ಆ ಎದೆನಡುಗಿಸುವ ಪ್ರತಿಯೊಂದು ಘಟನೆಯನ್ನೂ ವಿವರಿಸಿದ್ದಾನೆ ಮುಕೇಶ್.
ವಕೀಲರ ಮೊಂಡು`ವಾದ'
ಅಪರಾಧಗಳ ಪರ ವಕೀಲರಿಬ್ಬರ ಹೇಳಿಕೆಗಳನ್ನೂ ಸಾಕ್ಷ್ಯಚಿತ್ರದಲ್ಲಿ ಪಡೆಯಲಾಗಿದೆ. ಇಬ್ಬರು ವಕೀಲರು ಕೂಡ ತಮ್ಮ ಹೊಣೆಗಾರಿಕೆ ಮರೆತು, ಅತ್ಯಾಚಾರದಲ್ಲಿ ಹೆಣ್ಣುಮಕ್ಕಳದ್ದೇ ತಪ್ಪು ಎಂಬಂತೆ ಮಾತನಾಡಿದ್ದಾರೆ. `ನಮ್ಮ ಕುಟುಂಬ
ಸದಸ್ಯರ್ಯಾರಾದರೂ ಮದುವೆಗೆ ಮುಂಚೆ ಯುವಕನ ಜತೆ ಸಂಪರ್ಕ ಹೊಂದಿದ್ದರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುತ್ತಿದ್ದೆ' ಎಂದೂ ಹೇಳಿದ್ದಾರೆ.
ಹೆತ್ತವರ ರೋದನ, ಉತ್ತರವಿಲ್ಲದ ಪ್ರಶ್ನೆಗಳು ವೈದ್ಯೆಯಾಗಬೇಕೆಂದು ಬಯಸಿದ ಮಗಳು ಕಾಮುಕರ ಕೈಯ್ಯಲ್ಲಿ ಸಿಕ್ಕು ದುರಂತ ಅಂತ್ಯಕಂಡದ್ದನ್ನು ವಿವರಿಸುವ ನಿರ್ಭಯಾಳ ಹೆತ್ತವರನ್ನೂ ಸಾಕ್ಷ್ಯಚಿತ್ರದಲ್ಲಿ ಕಾಣಬಹುದು.
ಸಾಕ್ಷ್ಯಚಿತ್ರದುದ್ದಕ್ಕೂ ಹಲವು ಬಾರಿ ನಿರ್ಭಯಾಳ ತಂದೆ ಮತ್ತು ತಾಯಿಯ ಹೇಳಿಕೆಗಳನ್ನು ತೋರಿಸಲಾಗಿದೆ. ಮಗಳು ಹುಟ್ಟಿದಾಗ ಸಿಹಿ ಹಂಚಿ ಸಂಭ್ರಮಪಟ್ಟಿದ್ದು, ಆಕೆಯನ್ನು ಎದೆಯ ಮೇಲೆ ಮಲಗಿಸಿಕೊಂಡದ್ದು, ಆಕೆಯ ಪುಟ್ಟ ಕೈಬೆರಳುಗಳನ್ನು ಹಿಡಿದುಕೊಂಡು ನಡೆದಿದ್ದು, ಆಕೆ ಕೇಳುತ್ತಿದ್ದ ಮುಗ್ಧ ಮುಗ್ಧ ಪ್ರಶ್ನೆಗಳು, ಅವಳ ವಿದ್ಯಾಭ್ಯಾಸಕ್ಕಾಗಿ ಜಮೀನನ್ನೇ ಮಾರಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮಗಳು ಆಡಿದ ಪ್ರತಿಯೊಂದು ಮಾತು... ಹೀಗೆ ನಿರ್ಭಯಾ ಹುಟ್ಟಿದಂದಿನಿಂದ ಆಕೆಯ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುವವರೆಗೂ ಏನೆಲ್ಲ ನಡೆಯಿತು ಎಂಬುದನ್ನು ಹೆತ್ತವರು ನೆನಪಿಸಿಕೊಂಡಿದ್ದಾರೆ.
ಸಾಕ್ಷ್ಯಚಿತ್ರಕ್ಕೆ ತೆರೆ?
ಆಕೆಯ ಹೆಸರನ್ನು ಬಹಿರಂಗಪಡಿಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಜ್ಯೋತಿ ಒಂದು ಪ್ರತೀಕವಾಗಿದ್ದಾಳೆ. ಸಾವಿನ ಮೂಲಕ ಆಕೆ ದೇಶದಲ್ಲಿ ಮಾತ್ರವಲ್ಲ, ವಿಶ್ವದಲ್ಲೇ ಹೊಸ ಬೆಳಕು ಹರಿಸಿದ್ದಾಳೆ. ಜತೆಗೆ ಒಂದು ಪ್ರಶ್ನೆಯನ್ನೂ ಮುಂದಿಟ್ಟಿದ್ದಾಳೆ- `ಮಹಿಳೆ' ಎಂಬ ಪದದ ಅರ್ಥವೇನು? ಆಕೆಯನ್ನು ನಮ್ಮ ಸಮಾಜ ನೋಡುತ್ತಿರುವ ಬಗೆಯೇನು? ನಾನು ಬಯಸುವುದಿ ಷ್ಟೆ. ಜಗತ್ತಿನಲ್ಲಿ ಎಂಥ ಕತ್ತಲು ಆವರಿಸಿದೆಯೋ ಆ ಕತ್ತಲನ್ನು ಈ `ಬೆಳಕು' ಒದ್ದೋಡಿಸಲಿ- ಎಂಬ ನಿರ್ಭಯಾಳ ತಾಯಿಯ ಮಾತಿನಿಂದ ಸಾಕ್ಷ್ಯಚಿತ್ರಕ್ಕೆ ತೆರೆ ಬೀಳುತ್ತದೆ.
ಇಂಡಿಯಾಸ್ ಡಾಟರ್ ನೋಡಿದ ನಂತರ ನನಗೆ ಆ ಮುಕೇಶ್‍ಗೆ ಹೊಡೆಬೇಕೆನಿಸಿಲ್ಲ, ಬದಲಿಗೆ ಅಪರಾಧಿಗಳ ಲಾಯರ್ ಎಮ್ ಎಲ್.ಶರ್ಮಾ ಆಡಿದ ಮಾತು ಮೈ ಉರಿಯುತ್ತಿದೆ. ಅವರಿಗೆ ನನ್ನ ಶಾಪವಿರಲಿ.
-ರುದ್ರಾಲಿ ಪಾಟಿಲ್
ಅಪರಾಧಿ ಪರ ಲಾಯರ್ ಹೇಳುವುದೇ ನಮ್ಮ ದೇಶದ ಸಂಸ್ಕೃತಿಯಾದರೆ. ಅಂಥ ಸಂಸ್ಕೃತಿಯನ್ನು ನಾನು ಧಿಕ್ಕರಿಸುತ್ತೇನೆ.
-ದಿಪ್ಪನಿತಾ
ಸಾಕ್ಷ್ಯ ಚಿತ್ರವನ್ನು ಬ್ಯಾನ್ ಮಾಡುವುದರಿಂದ ಅತ್ಯಾಚಾರ ನಿಲ್ಲುತ್ತದೆಯೆಂಬ ಸರ್ಕಾರದ ನಿರ್ಧಾರವನ್ನು ನಾನು ಒಪ್ಪುವುದಿಲ್ಲ.
-ಜ್ಯೋತಿ ಶರ್ಮಾ ಬಾವಾ
ಸರ್ಕಾರ v/s ಬಿಬಿಸಿ, ಯೂಟ್ಯೂಬ್, ಗೂಗಲ್
`ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರ ಭಾರತ ಸರ್ಕಾರ ಮತ್ತು ಬಿಬಿಸಿ, ಯೂಟ್ಯೂಬ್, ಗೂಗಲ್ ನಡುವಿನ ಸಮರವಾಗಿ ಬದಲಾಯಿತು. ಸರ್ಕಾರ ಸಾಕ್ಷ್ಯಚಿತ್ರ ಪ್ರಸಾರಕ್ಕೆ ನಿರ್ಬಂಧ ಹೇರಿದ್ದರೂ, ಕ್ಯಾರೇ ಎನ್ನದೆ ಬಿಬಿಸಿ ಅದನ್ನು ಪ್ರಸಾರ ಮಾಡಿದೆ. ಮತ್ತೊಂದೆಡೆ, ಯೂ ಟ್ಯೂಬ್, ಗೂಗಲ್ ಸೇರಿ ಹಲವು ವಿಡಿಯೋ ಶೇರಿಂಗ್ ವೆಬ್‍ಸೈಟ್‍ಗಳಲ್ಲೂ ಸಾಕ್ಷ್ಯ ಚಿತ್ರ ಪ್ರಸಾರ ವಾಯಿತು. ನಂತರ, ಸರ್ಕಾರದ ಸೂಚನೆ ಕೈಸೇರುತ್ತಿದ್ದಂತೆ ಗೂಗಲ್, ಯೂ ಟ್ಯೂಬ್‍ಗಳು ಸಾಕ್ಷ್ಯಚಿತ್ರವನ್ನು ತೆಗೆದುಹಾಕಿದರೂ, ಅಷ್ಟರಲ್ಲಾಗಲೇ ಅದು ಜಾಲಿಗರ ಕೈಸೇರಿಯಾಗಿತ್ತು. ಕೆಲವೇ ಕ್ಷಣಗಳಲ್ಲಿ ಡೌನ್‍ಲೋಡ್ ಆಗಿ, ಬೇರೆ ಬೇರೆ ಹೆಸರುಗಳಲ್ಲಿ ಪ್ರಸಾರವಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯನ್ನೂ ಹುಟ್ಟುಹಾಕಿತು.
ತಡೆಯುವುದು ಅಸಾಧ್ಯ ಎಂದ ತಜ್ಞರು
ಒಂದು ಬಾರಿ ಸಾಮಾಜಿಕ ತಾಣಗಳಲ್ಲಿ ಪ್ರಸಾರವಾಗಿರುವ ಸಾಕ್ಷ್ಯಚಿತ್ರವನ್ನು ಸಂಪೂರ್ಣವಾಗಿ ತೆಗೆದುಹಾಕಲು ಸಾಧ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಮ್ಮೆ ಪ್ರಸಾರವಾಯಿತೆಂದರೆ, ಅದರ ಹರಿವು ತಡೆಯಲಸಾಧ್ಯ. ಇದು ಸೈಬರ್ ಜಗತ್ತಿನ ವಿಶೇಷ. ಜತೆಗೆ, ಹೆಚ್ಚಿನ ಸರ್ವರ್‍ಗಳು ವಿದೇಶಗಳಲ್ಲಿರುವ ಕಾರಣ ವಿಡಿಯೋ ಅಪ್‍ಲೋಡ್‍ನ ಮೂಲವನ್ನು ಕಂಡುಹಿಡಿಯುವುದೂ ಕಷ್ಟವಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ಹೇಳಿಕೆಗೆ ಖಂಡನೆ
ಸಾಕ್ಷ್ಯಚಿತ್ರದಲ್ಲಿ ಅಪರಾಧಿಗಳ ಪರ ವಕೀಲರು ಆಡಿರುವ ಮಾತುಗಳನ್ನು ವಕೀಲರ ಸಮುದಾಯವೇ ಖಂಡಿಸಿದೆ. ಮಹಿಳೆಯರ ಬಗ್ಗೆ ವಕೀರರು ಆಕ್ಷೇಪಾರ್ಹ ಮಾತು ಆಡಿದ್ದಾರೆ. ಆದರೆ ಯಾವುದೇ ದೂರುಗಳು ಬರದೇ ನಾವು ಆ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲಸಾಧ್ಯ ಎಂದು ಬಾರ್ ಅಸೋಸಿಯೇಷನ್ ಆಫ್ ಇಂಡಿಯಾ(ಬಿಸಿಐ) ಹೇಳಿದೆ.
ಮಹಿಳಾ ಹೋರಾಟಗಾರರ ವಿರೋಧ
ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವ ಸರ್ಕಾರದ ನಿರ್ಧಾರವನ್ನು ಮಹಿಳಾಪರ ಸಂಘಟನೆಗಳು ವಿರೋಧಿಸಿವೆ. ಜತೆಗೆ, ಅಪರಾಧಿಗಳ ಪರ ವಕೀಲರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿವೆ.
Advertisement