

ದಿಮಾಪುರ್: ನಾಗಾಲ್ಯಾಂಡ್ ನ ದಿಮಾಪುರದಲ್ಲಿ ಗುರುವಾರ ಅತ್ಯಾಚಾರಿ ಮೇಲೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣವನ್ನು ಸಿಎಂ ಟಿಆರ್ ಜಿಲಾಂಗ್ ಅವರು ತನಿಖೆಗೆ ಆದೇಶಿಸಿದ್ದಾರೆ.
ಇಂದು ನವದೆಹಲಿಯಲ್ಲಿ ಮಾತನಾಡಿದ ಜಿಲಾಂಗ್ ಅವರು, ದಿಮಾಪುರದಲ್ಲಿ ನಿಷೇಧಾಜ್ಞೆಯನ್ನು ಸಡಿಲಗೊಳಿಸಿದ್ದು ತಪ್ಪಾಗಿದೆ. ನಿಷೇಧಾಜ್ಞೆಯನ್ನು ಸಡಿಲಗೊಳಿಸಿದ ವೇಳೆ ಪ್ರತಿಭಟನಾಕಾರರು ಆರೋಪಿಯನ್ನು ಜೈಲಿನಿಂದ ಹೊರಗೆಳೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಪ್ರಕರಣ ಸಂಬಂಧ ಈಗಾಗಲೇ ತನಿಖೆಗೆ ಆದೇಶಿಸಲಾಗಿದ್ದು, ಅಧಿಕಾರಿಗಳು ಶೀಘ್ರದಲ್ಲಿಯೇ ವರದಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಶಾಂತಿ ಕಾಪಾಡುವಂತೆ ಸಿಎಂ ಜಿಲಾಂಗ್ ಮನವಿ
ಇನ್ನು ನಿನ್ನೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನಾಗಾಲ್ಯಾಂಡ್ ಸಿಎಂ ಜಿಲಾಂಗ್ ಅವರು ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಜನತೆಯಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಆರೋಪಿಯನ್ನು ಪ್ರತಿಭಟನಾಕಾರರು ಹೊರಗಳೆದೊಯ್ದ ದೃಶ್ಯಾವಳಿಗಳನ್ನು ಕೂಡ ಪ್ರಸಾರ ಮಾಡದಂತೆ ಮನವಿ ಮಾಡಿದ್ದಾರೆ.
ಇನ್ನು ಅತ್ಯಾಚಾರ ಪ್ರಕರಣ ಸಂಬಂಧ ಬಂಧಿತನಾಗಿದ್ದ ಸೈಯದ್ ಫರೀದ್ ಖಾನ್ ಎಂಬಾತನನ್ನು ಉದ್ರಿಕ್ತರ ಗುಂಪೊಂದು ನಿನ್ನೆ ಜೈಲಿನಿಂದಲೇ ಹೊರಗೆಳೆದು ಸಾಮೂಹಿಕವಾಗಿ ಹಲ್ಲೆ ಮಾಡಿತ್ತು. ನಾಗಾ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದ ಮೇಲೆ ಫೆಬ್ರವರಿ 23 ರಂದು ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಬಂದ ಉದ್ರಿಕ್ತರ ಗುಂಪು ಜೈಲಿನ ಎರಡು ಗೇಟುಗಳನ್ನು ಕಿತ್ತು ಒಳ ಬಂದು ಆರೋಪಿಯನ್ನು ಜೈಲಿನಿಂದ ಹೊರಕ್ಕೆ ಎಳೆದು ತಂದಿದ್ದಾರೆ. ಈ ವೇಳೆ ಜೈಲಿನ ಭದ್ರತಾ ಸಿಬ್ಬಂದಿಗಳು ಏನು ಮಾಡಲಾಗದೆ ಮೂಕ ಪ್ರೇಕ್ಷಕರಂತಾಗಿದ್ದರು.
ಜೈಲಿನಿಂದ ಹೊರಗೆಳೆದ ಪ್ರತಿಭಟನಾಕಾರರು ಫರೀದ್ ಖಾನ್ ನನ್ನು ವಿವಸ್ತ್ರಗೊಳಿಸಿ ಆತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಫರೀದ್ ಖಾನ್ ಅಲ್ಲಿಯೇ ಸಾವನ್ನಪ್ಪಿದ್ದ. ಇನ್ನು ಮೃತ ಸೈಯದ್ ಫರೀದ್ ಖಾನ್ ಬಾಂಗ್ಲಾದೇಶದ ಮೂಲದವನಾಗಿದ್ದು, ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದನು ಎಂಬ ವಾದ ಕೂಡ ಕೇಳಿಬರುತ್ತಿದೆ.