

ನವದೆಹಲಿ: ನಿರ್ಭಯಾ ಸಾಕ್ಷ್ಯಚಿತ್ರದಲ್ಲಿ ಮಹಿಳೆಯರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿ, ವಿಶ್ವಾದ್ಯಂತ ಟೀಕೆಗೆ ತುತ್ತಾಗಿದ್ದರೂ ವಕೀಲ ಎಪಿ ಸಿಂಗ್ ಮಾತ್ರ ತಮ್ಮ ಉದ್ಧಟತನ ಮುಂದುವರಿಸಿದ್ದಾರೆ.
ಪ್ರೇಮಿಗಳ ದಿನ, ಕಿಸ್ ಆಫ್ ಲವ್ ಅಭಿಯಾನದಂತಹ ಆಚರಣೆಗಳ ಮೇಲೆ ನಿಷೇಧ ಹೇರಿದರೆ ಮಾತ್ರ ಭಾರತದಲ್ಲಿ ಅತ್ಯಾಚಾರಗಳನ್ನು ತಡೆಗಟ್ಟಬಹುದು ಎಂದು ಹೇಳುವ ಮೂಲಕ ಸಿಂಗ್ ಹೊಸ ವಿವಾದಕ್ಕೆ ನಾಂದಿಹಾಡಿದ್ದಾರೆ. ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ(ಬಿಸಿಐ)ದಿಂದ ಶೋಕಾಸ್ ನೋಟಿಸ್ ಪಡೆದ ಬೆನ್ನಲ್ಲೇ ಎಪಿ ಸಿಂಗ್ ಅವರು ಮತ್ತೊಂದು ವಿವಾದ ಸೃಷ್ಟಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ಭಾನುವಾರ ಮೇಲ್ ಟುಡೇ ಜತೆ ಮಾತನಾಡಿದ ಎಪಿ ಸಿಂಗ್ , ಅತ್ಯಾಚಾರ ತಡೆಯಬೇಕೇ, ಹಾಗಿದ್ದರೆ ಪ್ರೇಮಿಗಳ ದಿನ, ಕಿಸ್ ಆಫ್ ಲವ್‍ಗೆ ನಿಷೇಧ ಹೇರಿ. ಇವೆಲ್ಲವೂ ಪಾಶ್ಚಿಮಾತ್ಯರ ಕುರುಡು ಅನುಕರಣೆಯಾಗಿದ್ದು, ನಮ್ಮ ಸಂಸ್ಕೃತಿಗೆ ಹೊಂದಿಕೆಯಾಗುವುದಿಲ್ಲ ಎಂದಿದ್ದಾರೆ.
ಚಲಿಸುತ್ತಿರುವ ಕಾರಲ್ಲಿ ಅತ್ಯಾಚಾರ
9ನೇ ತರಗತಿಯ ವಿದ್ಯಾರ್ಥಿನಿ ಮತ್ತು 23 ವರ್ಷದ ಯುವತಿಯನ್ನು ಅಪಹರಿಸಿ, ಚಲಿಸುತ್ತಿರುವ ಕಾರಿನಲ್ಲೇ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಕ್ರಮವಾಗಿ ಒಡಿಶಾ ಮತ್ತು ಪಂಜಾಬ್‍ನಲ್ಲಿ ನಡೆದಿದೆ. ವಿದ್ಯಾರ್ಥಿನಿ ಮೇಲೆ ಫೆ.18ರಂದೇ ಅತ್ಯಾಚಾರ ನಡೆದಿತ್ತಾದರೂ ಶುಕ್ರವಾರ ಆಕೆ ಕೇಸು ದಾಖಲಿಸಿದ್ದಾಳೆ. ಇದೇ ವೇಳೆ, 23ರ ಯುವತಿಯನ್ನು ಶನಿವಾರ ರಾತ್ರಿ ಅಪಹರಿಸಿದ ಮೂವರು ದುಷ್ಕರ್ಮಿಗಳು ಗ್ಯಾಂಗ್‍ರೇಪ್ ಮಾಡಿದ ಬಳಿಕ ಆಕೆಯನ್ನು ಪಂಜಾಬ್‍ನ ರಾಜ್‍ಗುರು ನಗರದಲ್ಲಿ ಬಿಟ್ಟು ಹೋಗಿದ್ದಾರೆ. ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಮತ್ತೊಂದೆಡೆ, ಉತ್ತರಪ್ರ ದೇಶದಲ್ಲಿ 32 ವರ್ಷದ ಕಿವುಡಿ, ಮೂಗಿ ಮಹಿಳೆ ಮೇಲೆ 6 ಮಂದಿ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
2 ತಿಂಗಳಲ್ಲಿ 300 ಅತ್ಯಾಚಾರ!
ವಿಶ್ವ ಮಹಿಳಾ ದಿನದಂದೇ ಆತಂಕಕಾರಿ ವರದಿ ಹೊರಬಿದ್ದಿದೆ. ದೆಹಲಿಯಲ್ಲಿ ಈ ವರ್ಷದ ಮೊದಲ 2 ತಿಂಗಳಲ್ಲಿ 300 ಅತ್ಯಾಚಾರ ಪ್ರಕರಣ, 500 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಜತೆಗೆ, ಶೇ.96ರಷ್ಟು ಪ್ರಕರಣಗಳು ಕುಟುಂಬ ಸದಸ್ಯರು ಹಾಗೂ ಆತ್ಮೀಯರಿಂದಲೇ ನಡೆದಿದೆ ಎಂಬ ವಿಚಾರವನ್ನೂ ಬಹಿರಂಗ ಪಡಿಸಿದ್ದಾರೆ.
ಆಗ್ರಾದಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ
ಕೇಂದ್ರ ನಿಷೇಧ ಹೇರಿರುವ `ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರವನ್ನು ಮಹಿಳಾ ದಿನದ ಅಂಗವಾಗಿ ಆಗ್ರಾದ ರೂಪ್‍ಧನ್ ಗ್ರಾಮದಲ್ಲಿ ಭಾನುವಾರ ಪ್ರದರ್ಶಿಸಲಾಯಿತು. ಮಹಿಳಾ ಪರ ಹೋರಾಟಗಾರ ಕೇತನ್ ದೀಕ್ಷಿತ್ ಈ ಪ್ರದರ್ಶನ ಏರ್ಪಡಿಸಿದ್ದರು. ಸಾಕ್ಷ್ಯಚಿತ್ರದ ಮೇಲಿನ ನಿಷೇಧದ ವಿರುದ್ಧ ನಾವು ನಡೆಸುತ್ತಿರುವ ಮೊದಲ ಹೋರಾಟ ಇದು ಎಂದು ಅವರು ಹೇಳಿದರು.
Advertisement