
ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರು ಬ್ರಿಟಿಷರ ಏಜೆಂಟ್ ಆಗಿದ್ದರು ಮತ್ತು ಭಾರತಕ್ಕೆ ದೊಡ್ಡ ನಷ್ಟ ಉಂಟು ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೆಯ ಕಾಟ್ಜು ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರುವ ಕಾಟ್ಜು, ಭಾರತ ಹಲವು ಭಾಷೆ, ಜಾತಿ, ಧರ್ಮಗಳ ತವರಾಗಿದ್ದು, ಬ್ರಿಟಿಷರು ಇಲ್ಲಿನ ವೈವಿದ್ಯತೆಯನ್ನು ಮನಗಂಡು, ಒಡೆದು ಆಳುವ ತಂತ್ರವನ್ನು ಆರಂಭಿಸಿದರು. ಅಲ್ಲದೆ ಹಲವು ದಶಕಗಳ ಕಾಲ ರಾಜಕಾರಣದಲ್ಲಿ ಧರ್ಮವನ್ನು ಬೆರೆಸುತ್ತಾ ಬಂದು ತಮ್ಮ ಲಾಭಕ್ಕಾಗಿ ಜನರನ್ನು ಧಾರ್ಮಿಕವಾಗಿ ವಿಭಜಿಸಿದರು. ಗಾಂಧೀಜಿ ಅವರು ಸಹ ಬ್ರಿಟಿಷರ ಈ ಒಡೆದು ಆಳುವ ತಂತ್ರವನ್ನು ಮುಂದುವರಿಸಿಕೊಂಡು ಬಂದರು ಎಂದು ಹೇಳಿದ್ದಾರೆ.
ಗಾಂಧೀಜಿಯವರು 1915ರಲ್ಲಿ ದಕ್ಷಿಣ ಆಫ್ರಿಕದಿಂದ ಭಾರತಕ್ಕೆ ಮರಳಿದರು. ಅಂದಿನಿಂದ ಅವರು ಸಾಯುವ ತನಕ, ಅಂದರೆ 1948ರ ತನಕದ ಅವರ ಎಲ್ಲ ಭಾಷಣಗಳು ಮತ್ತು ಬರವಣಿಗೆಗಳನ್ನು (ಹರಿಜನ, ಯಂಗ್ ಇಂಡಿಯಾ ಪತ್ರಿಕೆಗಳಲ್ಲಿ ಪ್ರಕಟವಾದವುಗಳು) ಸೂಕ್ಷ್ಮವಾಗಿ ಅವಲೋಕಿಸಿದರೆ ಅವರು ಎಲ್ಲೆಡೆಯೂ ಹಿಂದೂ ಧರ್ಮದ ಚಿಂತನೆಗಳನ್ನೇ ಒತ್ತಿ ಹೇಳುತ್ತಾ ಬಂದರು - ಉದಾಹರಣೆಗೆ ರಾಮರಾಜ್ಯ, ಗೋರಕ್ಷಾ, ಬ್ರಹ್ಮಚರ್ಯ, ವರ್ಣಾಶ್ರಮ ಧರ್ಮ (ಜಾತಿ ಪದ್ಧತಿ) ಇತ್ಯಾದಿ. 1921ನ ಜೂ.10ರಂದು ಯಂಗ್ ಇಂಡಿಯಾದಲ್ಲಿ ಗಾಂಧೀಜಿಯವರು ಬರೆಯುತ್ತಾರೆ: ನಾನೋರ್ವ ಸನಾತನಿ ಹಿಂದು. ನಾನು ವರ್ಣಾಶ್ರಮ ಧರ್ಮವನ್ನು ನಂಬುತ್ತೇನೆ. ಗೋವುಗಳ ರಕ್ಷಣೆಯಲ್ಲಿ ವಿಶ್ವಾಸ ಇರಿಸಿದ್ದೇನೆ. ಗಾಂಧೀಜಿಯವರು ತಮ್ಮ ಸಭೆಗಳಲ್ಲಿ ಹಿಂದು ಭಜನೆಗಳನ್ನು ಹಾಡುತ್ತಿದ್ದರು. ರಘುಪತಿ ರಾಘವ ರಾಜಾರಾಮ್ ಎನ್ನುವ ಭಜನೆ ಅವರಿಗೆ ಅತ್ಯಂತ ಪ್ರಿಯವಾಗಿತ್ತು ಎಂದು ಕಾಟ್ಜು ಹೇಳುತ್ತಾರೆ.
Advertisement