
ನವದೆಹಲಿ: ನಿರ್ಭಯಾ ಪ್ರಕರಣದ ಕುರಿತ ಸಾಕ್ಷ್ಯಚಿತ್ರಕ್ಕೆ ನಿಷೇಧ ಹೇರಿರುವ ಭಾರತ ಸರ್ಕಾರ ಅವಮಾನದಲ್ಲಿ ತಲೆತಗ್ಗಿಸಬೇಕು ಎಂದು ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಹೇಳಿದ್ದಾರೆ.
ಈ ಕುರಿತಂತೆ ಅಮೆರಿಕಾದ ಲಾಸ್ ಏಂಜಲೀಸ್ ಟೈಮ್ಸ್ ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಲೆಸ್ಲಿ ಉಡ್ವಿನ್ ಅವರು, ಗೃಹ ಸಚಿವ ರಾಜನಾಥ್ ಸಿಂಗ್ ಅವರು ಸಾಕ್ಷ್ಯ ಚಿತ್ರವನ್ನು ವೀಕ್ಷಿಸದೇ ಚಿತ್ರಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಪದೇಪದೇ ಚಿತ್ರ ಕುರಿತು ತಪ್ಪು ಮಾಹಿತಿಗಳನ್ನು ಜನರಿಗೆ ನೀಡುತ್ತಿದ್ದಾರೆ. ಆಧುನಿಕ ಹಾಗೂ ತಂತ್ರಜ್ಞಾನದಲ್ಲಿ ಮುಂದುವರೆದಿರುವ ಯುಗದಲ್ಲಿ ಸಾಕ್ಷ್ಯಚಿತ್ರಗಳನ್ನು ನಿಷೇಧಿಸುವಂತಹ ಸರ್ಕಾರದ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ.
ಸಾಕ್ಷ್ಯಚಿತ್ರದ ಪರವಾಗಿ ಪ್ರತಿಭಟನೆ ನಡೆಸುತ್ತಿರುವವರ ಕುರಿತು ವಿರೋಧ ವ್ಯಕ್ತವಾಗಿರುವ ಕುರಿತಂತೆ ಮಾತನಾಡಿರುವ ಅವರು ಗಾಂಧೀಜಿ ಅವರ ಹಾಗೆಯೇ ಶಾಂತಿ ಮತ್ತು ಅಹಿಂಸಾತ್ಮಕವಾಗಿ ಪ್ರತಿಭಟನೆಗಳನ್ನು ನಡೆಸಿದರೆ ಆ ಪ್ರತಿಭಟನೆಗಳು ಒಳ್ಳೆಯದೆನ್ನಿಸಿಕೊಳ್ಳುತ್ತದೆ. ಪ್ರತಿಭಟನೆಯಲ್ಲಿ ಪೊಲೀಸರು ಒಳಗೊಂಡಾಗ ಮಾತ್ರವೇ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗುವಂತಾಗುತ್ತದೆ ಎಂದು ಹೇಳಿದ್ದಾರೆ.
ದೆಹಲಿ ಅತ್ಯಾಚಾರ ಪ್ರಕರಣದ ಅಪರಾಧಿ ಮುಕೇಶ್ ಸಿಂಗ್ನ ಸಂದರ್ಶನ ಒಳಗೊಂಡಿರುವ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ಬಿಬಿಸಿಗೆ ಸರ್ಕಾರ ಹಾಗೂ ನ್ಯಾಯಾಂಗ ಸೂಚನೆ ನೀಡಿತ್ತು. ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರಕ್ಕೊಳಗಾದ ನಿರ್ಭಯಾ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಅಂಶಗಳಿವೆ ಎಂದು ಕೇಂದ್ರ ಸರ್ಕಾರ ಆರೋಪಿಸಿತ್ತು. ಹೀಗಾಗಿ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಅವರ 'ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರಕ್ಕೆ ದೇಶಾದ್ಯಂತ ನಿಷೇಧ ಹೇರಿತ್ತು.
Advertisement