ಬೆಂಗಳೂರು: ತಮಿಳುನಾಡಿನ ಮಧುರೈ ಸಬ್ ಇನ್ಸ್‍ಪೆಕ್ಟರ್(ಎಸ್ಸೈ) ಒಬ್ಬರು ತಮ್ಮ ಮಗಳನ್ನು ಹಾಡಹಗಲೇ ನಡು ರಸ್ತೆಯಲ್ಲೇ ಥಳಿಸಿರುವ ಘಟನೆ ಗುರುವಾರ ಬೆಳಗ್ಗೆ ದೊಮ್ಮಲೂರು ಮೇಲ್ಸೆತುವೆ ಬಳಿ ನಡೆದಿದೆ.
ಮಧುರೈನ ಎಸ್ಸೈ ರಾಜಾರಾಮ್ ತಮ್ಮ ಮಗಳು ಸೂರ್ಯ ಎಂಬುವರನ್ನು ಹಿಗ್ಗಾಮುಗ್ಗಾ ಥಳಿಸಿ ಕಾಲಿನಿಂದ ಒದ್ದಿದ್ದಾರೆ. ನಡು ರಸ್ತೆಯಲ್ಲೇ ತಂದೆಯೇ ಮಗಳನ್ನು ಥಳಿಸುತ್ತಿರುವುದನ್ನು ಸ್ಥಳೀಯರು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದರು.
ಮಧುರೈನಲ್ಲಿ ಶಿಕ್ಷಕಿಯಾಗಿರುವ ಯುವತಿಯ ತಾಯಿ ಕೂಡಾ ಸ್ಥಳದಲ್ಲಿದ್ದರು. ಅವರೂ ಮಗಳ ಮೇಲಿನ ಕ್ರೌರ್ಯ ತಡೆಯಲು ಮುಂದಾಗಲಿಲ್ಲ.
ತಂದೆಯಿಂದ ಮಗಳ ಮೇಲೆ ಹಲವು ಹೊತ್ತು ದೌರ್ಜನ್ಯದ ಬಳಿಕ ಧೈರ್ಯ ಮಾಡಿದ ಇಬ್ಬರು ಯುವಕರು ಹಾಗೂ ಓರ್ವ ತರುಣಿ ಹಲ್ಲೆಗೊಳಗಾದ ಯುವತಿಯನ್ನು ರಕ್ಷಿಸಿ ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು.
ಅಲ್ಲದೇ ಅದನ್ನು ತಡೆಯಲು ಪ್ರಯತ್ನಿಸಿದ್ದ ಫೊಟೋ ಹಾಗೂ ವಿಡಿಯೋ ಕೂಡಾ ಮಾಡಿಕೊಂಡಿದ್ದಾರೆ. ಈ ವಿಡಿಯೋ ಹಾಗೂ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೇ ತಂದೆ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿದೆ.
ಮೂವರು ಹಲ್ಲೆಯನ್ನು ತಡೆಯಲು ಯತ್ನಿಸಿದ್ದರು. ಆದರೆ, ಉದ್ರಿಕ್ತನಾಗಿದ್ದ ತಂದ ರಾಜಾರಾಮ್ ಕೂದಲು ಹಿಡಿದು ಎಳೆದಾಡಿ ಥಳಿಸುತ್ತಲೇ ಇದ್ದ. ಆತನನ್ನು ಹೇಗೋ ನಿಯಂತ್ರಿಸಿ ಬೈಕ್‍ನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲು ಯುವತಿ ಯತ್ನಿಸಿದ್ದಾಳೆ.
ಆದರೆ, ಅದಕ್ಕೆ ತಂದೆ ಅವಕಾಶ ನೀಡಲಿಲ್ಲ. ಕೊನೆಗೆ ಯುವಕರು ತಮ್ಮ ಕಾರಿನಲ್ಲಿ ಕೂರಿಸಿದ್ದರು. ಅಲ್ಲಿಗೂ ಬಿಡದ ರಾಜರಾಮ್, ಕಾರಿನಿಂದ ಹೊರಗೆ ಎಳೆಯಲು ಯತ್ನಿಸಿದ್ದ ಕಾರನ್ನು ಲಾಕ್ ಮಾಡಿದ್ದರು. ಅಷ್ಟಕ್ಕೇ ಸುಮ್ಮನಾಗದೇ ಕಾರಿನ ಬಾನೆಟ್ ಮೇಲೆ ಕುಳಿತ ರಾಜಾರಾಮ್ ಕಾರು ಚಲಿಸಲು ಅವಕಾಶ ನೀಡಲಿಲ್ಲ.
ಹೀಗಾಗಿ, ಯುವಕರು 100ಕ್ಕೆ ಕರೆಮಾಡಿ ಮಾಹಿತಿ ನೀಡಿದ್ದರು. ಅದಾದ ಅರ್ಧ ತಾಸಿನ ನಂತರ ಹಲಸೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಹಲ್ಲೆ ನಡೆಸುತ್ತಿದ್ದ ತಂದೆ ಹಾಗೂ ದೌರ್ಜನ್ಯ ಕ್ಕೊಳಗಾದ ಮಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.
ಯುವತಿ ಸೂರ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಆಕೆ ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಾಳೆ ಹಾಗೂ ಆತನೊಂದಿಗೆ ಓಡಾಡುತ್ತಿದ್ದಾಳೆ ಎಂದು ಕೆಲವರು ಮಧುರೈನಲ್ಲಿದ್ದ ತಂದೆ-ತಾಯಿಗೆ ಮಾಹಿತಿ ನೀಡಿದ್ದರು. ಇದರಿಂದ ಕುಪಿತಗೊಂಡ ಪಾಲಕರು, ಬೆಂಗಳೂರಿಗೆ ಬಂದು ಸೂರ್ಯಳನ್ನು ವಿಚಾರಣೆ ನಡೆಸಿದ್ದಾರೆ.
ಆಕೆ, ಆ ರೀತಿ ಏನೂ ಇಲ್ಲ ಎಂದು ಹೇಳುತ್ತಿದ್ದಂತೆ ರಸ್ತೆಗೆ ಕರೆ ತಂದು ಹಿಗ್ಗಾಮುಗ್ಗಾ ಥಳಿಸಲು ಆರಂಭಿಸಿದ್ದರು. ಪಾಲಕರಿಗೆ ಸೂರ್ಯ ಬೆಂಗಳೂರಿನಲ್ಲಿ ಇರುವುದು ಇಷ್ಟವಿರಲಿಲ್ಲ. ಅಲ್ಲದೇ, ಅವರು ನೋಡಿದ ಹುಡುಗನನ್ನೇ ಮದುವೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದರು.
ಇದಕ್ಕೆ ಇಷ್ಟವಿಲ್ಲದ ಸೂರ್ಯ ಪಾಲಕರ ಮಾತು ಒಪ್ಪದೇ ಬೆಂಗಳೂರಿನಲ್ಲೇ ಉಳಿದುಕೊಂಡಿದ್ದಳು ಎನ್ನಲಾಗಿದೆ. ನಿಯಂತ್ರಣ ಕೊಠಡಿಗೆ ಸಾರ್ವಜನಿಕ ರಿಂದ ಮಾಹಿತಿ ಬಂದಿತ್ತು. ಕೂಡಲೇ ನಮ್ಮ ಸಿಬ್ಬಂದಿ ಸ್ಥಳಕ್ಕೆ ಹೋಗಿ ಪಾಲಕರನ್ನು ಹಾಗೂ ಯುವತಿಯನ್ನು ಠಾಣೆಗೆ ಕರೆಸಿದ್ದೆವು. ಈ ಸಂಬಂಧ ಯುವತಿ ದೂರು ನೀಡಿಲ್ಲ ಎಂದು ಹಲಸೂರು ಪೊಲೀಸರು ತಿಳಿಸಿದ್ದಾರೆ.
Advertisement