
ನವದೆಹಲಿ: ಬಿಬಿಸಿಗೋಸ್ಕರ ಲೆಸ್ಲಿ ಉಡ್ವಿನ್ ನಿರ್ಮಿಸಿರುವ `ಇಂಡಿಯಾಸ್ ಡಾಟರ್' ಸಾಕ್ಷ್ಯಚಿತ್ರದ ಪ್ರಸಾರದ ಮೇಲಿರುವ ನಿಷೇಧ ಹಿಂತೆಗೆಯುವುದಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.
ಈ ಸಾಕ್ಷ್ಯಚಿತ್ರವನ್ನು ನಿಷೇಧಿಸುವ ಸಂಬಂಧದಲ್ಲಿ ಹೊರಡಿಸಿರುವ ಮಾರ್ಗದರ್ಶಿಯನ್ನು ತನ್ನೆದುರು ಹಾಜರುಪಡಿಸುವಂತೆಯೂ ಅಂದು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ಕೇಂದ್ರ ಸರ್ಕಾರದ ನಿಷೇಧ ತೆರವುಗೊಳಿಸಬೇಕು ಎಂದು ಸಲ್ಲಿಸಲಾಗಿರುವ ಎರಡು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್, ಮಾರ್ಚ್ 3ರಂದು ಹೊರಡಿಸಲಾಗಿರುವ ಮಾರ್ಗದರ್ಶಿಯನ್ನು ಹಾಜರುಪಡಿಸುವಂತೆ ಆದೇಶಿಸಿ ವಿಚಾರಣೆಯನ್ನು ಏ. 15ಕ್ಕೆಮುಂದೂಡಿತು.
ಈ ಮೊದಲು ಹೈಕೋರ್ಟ್ ನ ಬೇರೊಂದು ಪೀಠವು ತಕ್ಷಣವೇ ನಿಷೇಧ ಹಿಂತೆಗೆದುಕೊಳ್ಳುವುದಕ್ಕೆ ನಕಾರ ಸೂಚಿಸಿತ್ತು. ಪ್ರಕರಣ(ಗಲ್ಲು ಶಿಕ್ಷೆಗೊಳಗಾದವರ ಮೇಲ್ಮನವಿ) ಸುಪ್ರೀಂನಲ್ಲಿ ವಿಚಾರಣೆಗೆ ಬಾಕಿ ಇದೆ ಎಂದು ಹೇಳಿತ್ತು.
Advertisement