ಕದನ ಪೀಡಿತ ಯೆಮನ್ ತೊರೆಯಲು ಭಾರತೀಯರಿಗೆ ಸೂಚನೆ

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕದನ ಪೀಡಿತ ಯೆಮನ್ ನಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಕೂಡಲೇ ಆ ದೇಶವನ್ನು ತೊರೆಯುವಂತೆ ಎಲ್ಲಾ ಭಾರತೀಯರಿಗೆ ಬುಧವಾರ ತುರ್ತು ಸೂಚನೆ  ನೀಡಲಾಗಿದೆ.

ಯೇಮನ್ ಅಧ್ಯಕ್ಷ ಅಬ್ದುರಹು ಮನ್ಸೂರ್‌ ಹದಿ ಅವರು ತಮ್ಮ ಅರಮನೆಯನ್ನು ತೊರೆದು ಪಲಾಯನಗೈದಿರುವಂತೆಯೇ, ಭಾರತ ಯೆಮೆನ್‌ನಲ್ಲಿರುವ, ಸುಮಾರು 3,500 ಭಾರತೀಯರಿಗೆ ಕೂಡಲೇ ದೇಶವನ್ನು ತೊರೆದು ಹೊರಬರುವಂತೆ ಮೂರನೇ ಬಾರಿಗೆ ಸೂಚನೆ ನೀಡಿದೆ.

ಈ ಸಂಬಂಧ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರು, ಯೆಮನ್ ನಲ್ಲಿ ಆಂತರಿಕ ಕಲಹ ತಾರಕಕ್ಕೇರಿದ್ದು, ತಕ್ಷಣ ಯೆಮೆನ್‌ ತೊರೆದು ಹೊರಬನ್ನಿ ಎಂಬ ತುರ್ತು ಸಂದೇಶವನ್ನು ನಾವು ಅಲ್ಲಿರುವ ಭಾರತೀಯರಿಗೆ ನೀಡಿದ್ದೇವೆ ಎಂದು ತಿಳಿಸಿದರು.

ಅಲ್ಲಿನ ಸರ್ಕಾರ, ಹುದೀಗಳು, ದಕ್ಷಿಣದ ಪ್ರತ್ಯೇಕತಾವಾದಿಗಳು, ಪ್ರಬಲ ಸುನ್ನಿ ಪಂಗಡಗಳು ಮತ್ತು ಸ್ಥಳೀಯ ಅಲ್‌ ಕಾಯಿದಾ ಉಗ್ರರು ಪರಸ್ಪರ ತೀವ್ರ ಕದನದಲ್ಲಿ ಮುಳುಗಿದ್ದಾರೆ. ತಮ್ಮ ಅರಮನೆಯಿಂದ ತನ್ನ ಪರಿವಾರದವರೊಡನೆ ಪಲಾನಯಗೈದಿರುವ ಯೆಮೆನ್‌ ಅಧ್ಯಕ್ಷ  ಹದಿ ಅವರನ್ನು ಸೆರೆ ಹಿಡಿದು ಕೊಟ್ಟವರಿಗೆ ಭಾರೀ ನಗದು ಬಹುಮಾನವನ್ನು ಬಂಡುಕೋರರು ತಮ್ಮ ಒಡೆತನದಲ್ಲಿರುವ ಟಿವಿ ವಾಹಿನಿಯಲ್ಲಿ  ಪ್ರಕಟಿಸಿದ್ದಾರೆ.

ಬಂಡುಕೋರರು ಹದಿ ಅವರ ತಾತ್ಕಾಲಿಕ ರಾಜಧಾನಿ ಏಡೆನ್‌ನಿಂದ ಕೇವಲ 60 ಕಿ.ಮೀ. ದೂರದಲ್ಲಿರುವ ವಾಯು ನಲೆಯೊಂದನ್ನು ವಶಪಡಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com