ದೋಷಮುಕ್ತನಾದರೂ ನೋವು ಮಾಸಿಲ್ಲ: ಖೇಮ್ಕಾ

`ವಾದ್ರಾ-ಡಿಎಲ್‍ಎಫ್' ಪರವಾನಗಿ ಒಪ್ಪಂದಕ್ಕೆ ಸಂಬಂಧಿಸಿ ಸಿಎಜಿ ವರದಿ ನನ್ನನ್ನು ದೋಷ ಮುಕ್ತಗೊಳಿಸಿರಬಹುದು. ಆದರೂ...
ಅಶೋಕ್ ಖೇಮ್ಕಾ (ಸಂಗ್ರಹ ಚಿತ್ರ)
ಅಶೋಕ್ ಖೇಮ್ಕಾ (ಸಂಗ್ರಹ ಚಿತ್ರ)

ಚಂಡೀಘಡ: `ವಾದ್ರಾ-ಡಿಎಲ್‍ಎಫ್' ಪರವಾನಗಿ ಒಪ್ಪಂದಕ್ಕೆ ಸಂಬಂಧಿಸಿ ಸಿಎಜಿ ವರದಿ ನನ್ನನ್ನು ದೋಷಮುಕ್ತಗೊಳಿಸಿರಬಹುದು. ಆದರೂ,  ನನ್ನ ಮೇಲೆ ಹೊರಿಸಲಾದ ಆರೋಪ ಪಟ್ಟಿಯ ಆಘಾತ, ನೋವು ನನಗೆ ಇಂದಿಗೂ ಇದೆ.' ಹೀಗೆಂದು ಹೇಳಿದ್ದು ಹರ್ಯಾಣದ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ.

ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾರ ಭೂಅಕ್ರಮದ ಬಗ್ಗೆ ಮೊದಲು ಸೀಟಿ ಊದಿದವರೇ ಖೇಮ್ಕಾ.  ಇದಕ್ಕಾಗಿ ಅವರು `ಬೆಲೆ' ಯನ್ನೂ ತೆತ್ತಿದ್ದರು. ಬುಧವಾರ ಹರ್ಯಾಣ ವಿಧಾನ ಸಭೆಯಲ್ಲಿ ಮಂಡಿಸಲಾದ ಮಹಾಲೇಖಪಾಲ (ಸಿಎಜಿ) ವರದಿಯು ವಾದ್ರಾರ ಡಿಎಲ್‍ಎಫ್  ಹಾಗೂ ಸ್ಕೈಲೈಟ್ ಹಾಸ್ಪಿಟಾಲಿಟಿ ಕಂಪನಿಗಳು ಅಕ್ರಮ ಎಸಗಿರುವುದನ್ನು ಬಹಿರಂಗಪಡಿಸಿದೆ. ಜತೆಗೆ, ವಾದ್ರಾ ಕಂಪನಿಯ ವಿರುದ್ಧ ಖೇಮ್ಕಾ ಅವರು ತೆಗೆದುಕೊಂಡ ಕ್ರಮ ಸರಿಯಾಗಿಯೇ ಇದೆ ಎಂದೂ ಹೇಳಿದೆ. ಹೀಗಾಗಿ ಖೇಮ್ಕಾ ದೋಷಮುಕ್ತರಾಗಿದ್ದಾರೆ.

ಖೇಮ್ಕಾ ಸರಣಿ ಟ್ವೀಟ್
ಈ ಬಗ್ಗೆ ಪ್ರತಿಕ್ರಿಯಿಸಿ ಗುರುವಾರ ಸರಣಿ ಟ್ವೀಟ್ ಗಳನ್ನು ಮಾಡಿರುವ ಖೇಮ್ಕಾ, `ನಾನು ದೋಷಮುಕ್ತ ಆಗಿದ್ದರೂ, ಆರೋಪಪಟ್ಟಿಯಿಂದಾದ ಆಘಾತದಿಂದ ಇನ್ನೂ ಹೊರಬಂದಿಲ್ಲ ಎಂದಿದ್ದಾರೆ. ಜತೆಗೆ, ನಿಜವಾದ ತಪ್ಪಿತಸ್ಥರೇ ನನ್ನ ವಿರುದ್ಧ ಆರೋಪದ ತೀರ್ಪುಗಾರರಾಗಿದ್ದರು. ನನ್ನ ನೋವು, ವೇದನೆಗಳೇ ರಾಜಕೀಯದ ನಂಜುಕಳೆಯಲು, ಅದನ್ನು ಸ್ವಚ್ಛಗೊಳಿಸಲು ನೆರವಾಗಬಹುದು ಎದಿದ್ದಾರೆ ಖೆಮ್ಕಾ.  ಲೈಸೆನ್ಸ್‍ಗಳ ಕಾಳದಂಧೆ ಮತ್ತು ಆಪ್ತರಿಗೆ ಪರವಾನಗಿ ನೀಡುವುದು ಸಾರ್ವಜನಿಕ ಸಂಪತ್ತಿನ ಲೂಟಿಯಿದ್ದಂತೆ. ಇಂತಹ ಕಾಳಸಂತೆಕೋರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೇ ಎಂದೂ ಪ್ರಶ್ನಿಸಿದ್ದಾರೆ.

ಕೊಂಕುಮಾತುಗಳಿಂದ ಏನೂ ಸಾಧಿಸಲಾಗದು: ಕಾಂಗ್ರೆಸ್
ಹರ್ಯಾಣದ ಹಿಂದಿನ ಸರ್ಕಾರ ವಾದ್ರಾರಿಗೆ ಬೆನ್ನೆಲುಬಾಗಿ ನಿಂತಿತ್ತು ಎಂಬ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್, ಅರ್ಧಸತ್ಯ ಹಾಗೂ ಕೊಂಕುಮಾತು ಗಳಿಂದ ಏನೂ ಸಾಧಿಸಲಾಗದು ಎಂದಿದೆ. ಅರ್ಧಸತ್ಯ, ವ್ಯಂಗ್ಯೋಕ್ತಿ ಹಾಗೂ ಪ್ರಚೋದಿತ ಆರೋಪದ ಆಧಾರದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ದೂಷಿಸುವ ಬದಲು, ನಾವು ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಮುಖ್ಯ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಸಿಎಜಿ ವರದಿಯಲ್ಲಿ ಎಲ್ಲೂ ವಾದ್ರಾ ಅವರಾಗಲೀ, ಡಿಎಲ್ ಎಫ್, ಸ್ಕೈಲೈಟ್ ಹಾಸ್ಪಿಟಾಲಿಟಿ ಸಂಸ್ಥೆಯಾಗಲೀ ತಪ್ಪೆಸಗಿದೆ ಎಂದು ಹೇಳಿಲ್ಲ ಎಂದೂ ಸುರ್ಜೇವಾಲಾ ತಿಳಿಸಿದ್ದಾರೆ. ಮುಂದಿನ ಕ್ರಮದ ಬಗ್ಗೆ ಚರ್ಚೆ ಮಹಾಲೇಖಪಾಲ ವರದಿ ಮಂಡನೆಯಾದ ಬೆನ್ನಲ್ಲೇ ಗುರುವಾರ ಹರ್ಯಾಣದ ಉನ್ನತ ಅಧಿಕಾರಿಗಳು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್‍ರನ್ನು ಭೇಟಿಯಾಗಿದ್ದಾರೆ. ಸಿಎಜಿ ವರದಿ ಆಧಾರದಲ್ಲಿ ಮುಂದೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಅವರು ಚರ್ಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com