
ಪಾಟ್ನಾ: ಬಸ್ ವೊಂದು ಕಣಿವೆಗೆ ಉರುಳಿ ಸುಮಾರು 10 ಪ್ರಯಾಣಿಕರು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.
ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ಸುಮಾರಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಜಾರ್ಖಂಡ್ ಗರ್ವಾಹ್ ಬಳಿ ಬಸ್ ಕಣಿವೆಗೆ ಉರುಳಿದೆ. ಪರಿಣಾಮ ಸ್ಥಳದಲ್ಲಿಯೇ 10 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು, 20 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಗಾಯಾಳು ಪ್ರಯಾಣಿಕರನ್ನು ಗರ್ವಾಹ್ ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಇನ್ನೂ ಹೆಚ್ಚಿನ ಸಾವು ನೋವುಗಳಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಪಘಾತಕ್ಕೀಡಾದ ಛತ್ತೀಸ್ ಘಡದ ಬಿಲಾಸ್ ಪುರದಿಂದ ಬಿಹಾರದ ಸಾಸರಂ ಕಡೆಗೆ ಪ್ರಯಾಣ ಬೆಳೆಸಿತ್ತು ಎಂದು ತಿಳಿದುಬಂದಿದ್ದು, ಗರ್ವಾಹ್ ಬಳಿಯ ಕಡಿದಾದ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಆಯತಪ್ಪಿ ಕಣಿವೆಗೆ ಉರುಳಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಮತ್ತು ಅಗ್ನಿ ಶಾಮಕ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚಾರಣೆಯನ್ನು ಮುಂದುವರೆಸಿದ್ದಾರೆ. ಕಣಿವೆ ತೀರ ಕಡಿದಾದ್ದರಿಂದ ಪ್ರಯಾಣಿಕರ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುವಂತಾಗಿತ್ತು.
ಪ್ರಸ್ತುತ ಎಲ್ಲ ಪ್ರಯಾಣಿಕರನ್ನು ಕಣಿವೆಯಿಂದ ಮೇಲೆತ್ತಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿರುವ ಗಾಯಾಳುಗಳ ಪೈಕಿ 20ಕ್ಕೂ ಹೆಚ್ಚು ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
Advertisement