
ನವದೆಹಲಿ: ಆಂತರಿಕ ಸಂಘರ್ಷದಿಂದ ನಲುಗುತ್ತಿರುವ ಯೆಮೆನ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಭಾರತೀಯರ ಪೈಕಿ 349 ಮಂದಿಯನ್ನು ರಕ್ಷಿಸಲಾಗಿದೆ ಎಂದು ಮೂಲಗಳ ತಿಳಿಸಿವೆ.
ಯೆಮೆನ್ ವಿರುದ್ಧ ಸಮರ ಸಾರಿರುವ ಸೌದಿ ಅರೇಬಿಯಾ ವಾಯುದಾಳಿ ನಡೆಸುತ್ತಿದ್ದು, ಯೆಮೆನ್ ಇದೀಗ ಯುದ್ಧಭೂಮಿಯಾಗಿ ಮಾರ್ಪಟ್ಟಿದೆ. ಹೀಗಾಗಿ ಯೆಮೆನ್ ಪ್ರಾಣಾಪಾಯಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣೆಗೆ ಮುಂದಾಗಿದ್ದ ಕೇಂದ್ರ ಸರ್ಕಾರ ನಿನ್ನೆ ಭಾರತೀಯ ನೌಕಾಪಡೆಯ ಐಎನ್ ಎಸ್ ಸುಮಿತ್ರಾ ಸೇರಿದಂತೆ ಒಟ್ಟು ನಾಲ್ಕು ಹಡಗಳನ್ನು ಮತ್ತು 4 ವಿಮಾನಗಳನ್ನು ಯೆಮೆನ್ ಗೆ ರವಾನೆ ಮಾಡಿತ್ತು. ಅಡೇನ್ ಬಂದರಿನಲ್ಲಿ ಲಂಗರು ಹಾಕಿದ್ದ ಐಎನ್ ಎಸ್ ಸುಮಿತ್ರಾ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ 349 ಭಾರತೀಯರನ್ನು ರಕ್ಷಣೆ ಮಾಡಿದೆ.
101 ಮಹಿಳೆಯರು ಮತ್ತು 28 ಮಂದಿ ಮಕ್ಕಳನ್ನು ಒಳಗೊಂಡಂತೆ ಒಟ್ಟು 349 ಮಂದಿ ಭಾರತಿಯರನ್ನು ರಾತ್ರಿ ಸುಮಾರು 9.45ರಲ್ಲಿ ಅಡೇನ್ ಬಂದರಿನಲ್ಲಿ ಒಟ್ಟು ಗೂಡಿಸಿ ಡ್ಜಿಬೌಟಿಗೆ ರವಾನೆ ಮಾಡಲಾಗಿದೆ. ಭಾರತೀಯ ವಾಯುಪಡೆಗೆ ಸೇರಿದ ಸಿ-17 ಯುದ್ಧ ವಿಮಾನದಲ್ಲಿ ಎಲ್ಲ ಭಾರತೀಯರನ್ನು ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಭಾರತೀಯ ನೌಕಾಪಡೆ ಯುದ್ಧ ಪೀಡಿತ ಯೆಮೆನ್ ನಲ್ಲಿ ನಡೆಸಿದ ಮೊದಲ ದೊಡ್ಡ ರಕ್ಷಣಾ ಕಾರ್ಯಾಚರಣೆ ಇದಾಗಿದ್ದು, ರಾಜಧಾನಿ ಸನಾದಲ್ಲಿ ಇರುವ ಮತ್ತಷ್ಟು ದೊಡ್ಡ ಸಂಖ್ಯೆಯಲ್ಲಿನ ಭಾರತೀಯರನ್ನು ರಕ್ಷಿಸಲು ನೌಕಾಪಡೆ ನಿರ್ಧರಿಸಿದೆ. ಇಂದು ಅಥವಾ ನಾಳೆ ಸನಾದಲ್ಲಿರುವ ಭಾರತೀಯರನ್ನು ಕೂಡ ರಕ್ಷಣೆ ಮಾಡುವ ಕುರಿತು ನೌಕಾಪಡೆಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೊದಲ ಹಂತದಲ್ಲೇ ಯಶಸ್ವಿಯಾದ ಆಪರೇಷನ್ ರಾಹತ್
ಇನ್ನು ಯುದ್ಧಪೀಡಿತ ಯೆಮೆನ್ ನಲ್ಲಿನ ಭಾರತೀಯರ ರಕ್ಷಣೆಗೆಗಾಗಿ ಭಾರತೀಯ ಸೇನೆ ರೂಪಿಸಿದ್ದ ಆಪರೇಷನ್ ರಹಾತ್ ಯೋಜನೆ ಮೊದಲ ಹಂತದಲ್ಲೇ ಯಶಸ್ಸುಗೊಂಡಿದ್ದು, ಅಡೇನ್ ಬಂದರಿನ ಮೂಲಕವಾಗಿ 349 ಭಾರತೀಯರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನೆ ಮಾಡಲಾಗಿದೆ. ಸುಮಾರು 4 ಸಾವಿರಕ್ಕೂ ಅಧಿಕ ಮಂದಿ ಭಾರತೀಯರು ಯೆಮೆನ್ ನಲ್ಲಿ ವಿವಿಧ ನೌಕರಿ ಮಾಡುತ್ತಿದ್ದು, ಇದೀಗ ಆಂತರಿಕ ಸಂಘರ್ಷದಿಂದಾಗಿ ಇವರು ಪ್ರಾಣಾಪಾಯಕ್ಕೆ ಸಿಲುಕಿದ್ದಾರೆ.
ಅಡೇನ್ ಗೆ ಮತ್ತೆರಡು ಸಮರ ನೌಕೆಗಳ ರವಾನೆ
ಯೆಮೆನ್ ನಲ್ಲಿ ಅಪಾಯಕ್ಕೆ ಸಿಲುಕಿರುವ ಭಾರತೀಯ ರಕ್ಷಣೆಗಾಗಿ ಭಾರತ ಮತ್ತೆರಡು ಸಮರ ನೌಕೆಗಳನ್ನು ರವಾನೆ ಮಾಡುತ್ತಿದ್ದು, ಐಎನ್ ಎಸ್ ಮುಂಬೈ ಮತ್ತು ಐಎನ್ ಎಸ್ ಟರ್ಕಾಶ್ ಯೆಮೆನ್ ನತ್ತಿ ಶೀಘ್ರದಲ್ಲಿಯೇ ಪ್ರಯಾಣ ಬೆಳೆಸಲಿವೆ. ಮುಂಬೈ ಬಂದರಿನಿಂದ ಯೆಮೆನ್ ಗೆ ಈ ನೌಕೆಗಳು ತೆರಳಲು 4 ದಿನಗಳ ಸಮಯ ಬೇಕಾಗುತ್ತದೆ. ಡ್ಜಿಬೌಟಿಗೆ ತೆರಳಲು 5 ದಿನಗಳ ಸಮಯ ಬೇಕು ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
Advertisement