1994 ರಲ್ಲಿ ದಾವೂದ್ ಶರಣಾಗಲು ಬಯಸಿದ್ದ: ನಿವೃತ್ತ ಡಿಐಜಿ ನೀರಜ್ ಕುಮಾರ್
ನವದೆಹಲಿ: ಭೂಗತ ಪಾತಕಿ ಹಾಗೂ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರುವಾರಿ ದಾವೂದ್ ಇಬ್ರಾಹಿಂ 1994 ರಲ್ಲಿ ಶರಣಾಗತಿಯಾಗಲು ಬಯಸಿದ್ದ. ಆದರೆ ಸುರಕ್ಷೆಯ ಬಗ್ಗೆ ಸಿಬಿಐಗೆ ಅನುಮಾನವಿದ್ದ ಕಾರಣ ದಾವೂದ್ ಶರಣಾಗತಿಯನ್ನು ಸಿಬಿಐ ಒಪ್ಪಿರಲಿಲ್ಲ ಎಂದು ನಿವೃತ್ತ ಡಿಐಡಿ ನೀರಜ್ ಕುಮಾರ್ ಸ್ಫೋಟಕ ಮಾಹಿತಿಯನ್ನು ಹೊರಹಾಕಿದ್ದಾರೆ.
ತಾವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸಾಕಷ್ಟು ಹರಸಾಹಸ ಪಟ್ಟು 1994ರಲ್ಲಿ ದಾವೂದ್ ಜೊತೆ ಮೂರು ಬಾರಿ ದೂರವಾಣಿ ಸಂಪರ್ಕ ಮಾಡಿ ಮಾತನಾಡಿದ್ದೆ. ಆ ಸಂದರ್ಭದಲ್ಲಿ ದಾವೂದ್ ಭಾರತಕ್ಕೆ ಮರಳಿ ಬಂದರೆ ನನ್ನ ವಿರೋಧಿಗಳು ನನ್ನ ಹತ್ಯೆ ಮಾಡುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದ್ದ. ಈ ವೇಳೆ ನಿನ್ನನ್ನು ಕಾಪಾಡುವುದು ಸಿಬಿಐ ಜವಾಬ್ದಾರಿ ಎಂದು ಹೇಳಿ ಆತನ ಮನವೊಲಿಸಿದ್ದೆ. ಹೀಗಾಗಿ ದಾವೂದ್ ಶರಣಾಗತಿಯಾಗುತ್ತೇನೆಂದು ಹೇಳಿದ್ದ.
ಆದರೆ ಸುರಕ್ಷಾ ಕ್ರಮದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸಿಬಿಐನ ಹಿರಿಯ ಅಧಿಕಾರಿಗಳು ದಾವೂದ್ ಜೊತೆಗಿನ ದೂರವಾಣಿ ಮಾತುಕತೆಯನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದರು ಎಂದು ನೀರಜ್ ತಾವು ಬರೆಯುತ್ತಿರುವ ಪುಸ್ತಕದಲ್ಲಿ ಸಿಬಿಐ ವಿರುದ್ಧ ಆರೋಪಿಸಿದ್ದಾರೆ.
1993 ರಲ್ಲಿ ದೆಹಲಿ ಆಯುಕ್ತರಾಗಿದ್ದ ನೀರಜ್ ಕುಮಾರ್ ಮಾರ್ಚ್ 12ರಂದು ದೇಶದ ವಾಣಿಜ್ಯ ನಗರಿಯಾಗಿರುವ ಮುಂಬೈ ಮೇಲೆ ನಡೆದ ಸರಣಿ ಬಾಂಬ್ ಸ್ಫೋಟದ ತನಿಖೆ ನಡೆಸುತ್ತಿದ್ದರು. 2013ರಲ್ಲಿ ತಮ್ಮ ಹುದ್ದೆಯಿಂದ ನೀರಜ್ ಕುಮಾರ್ ನಿವೃತ್ತರಾಗಿದ್ದರು.
ನೀರಜ್ ಕುಮಾರ್ ಅವರ ಈ ಆರೋಪವನ್ನು ತಳ್ಳಿಹಾಕಿರುವ ನಿವೃತ್ತ ಸಿಬಿಐ ಮುಖ್ಯಸ್ಥ ವಿಜಯ್ ರಾಮಾ ರಾವ್ ಅವರು, ನನ್ನ ಅಧಿಕಾರದ ಅವಧಿಯಲ್ಲಿ ದಾವೂದ್ ನಿಂದ ಈ ರೀತಿಯ ಯಾವುದೇ ಆಫರ್ ಗಳು ಬಂದಿರಲಿಲ್ಲ. ದಾವೂದ್ ನನ್ನು ಹಿಡಿಯಲು ನಾನು ಮತ್ತು ಇತರೆ ಅಧಿಕಾರಿಗಳು ಸಾಕಷ್ಟು ಹರಸಾಹಸ ಪಟ್ಟಿದ್ದೇವೆ. ದಾವೂದ್ ಶರಣಾಗತಿಯನ್ನು ನಾವು ಬಯಸುತ್ತೇವೆ. ಈ ರೀತಿಯ ಅವಕಾಶಗಳು ಸಿಕ್ಕಿದ್ದರೆ ಯಾವುದೇ ಕಾರಣಕ್ಕೂ ಬಿಡುತ್ತಿರಲಿಲ್ಲ. ದಾವೂದ್ ಹಿಡಿಯಲು ಅಥಿಕಾರಿಗಳು ಮಾಡುತ್ತಿದ್ದ ಪ್ರಯತ್ನಗಳಿಗೆ ನಾನು ಯಾವುದೇ ತಡೆಯುಂಟು ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ನೀರಜ್ ಆರೋಪಕ್ಕೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸಿಬಿಐನ ಕೆಲವು ಮೂಲಗಳು, ದಾವೂದ್ ಶರಣಾಗತಿಯಾಗುವ ಕುರಿತಂತೆ ಯಾವುದೇ ಮಾಹಿತಿಗಳು ದಾಖಲಾಗಿಲ್ಲ ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ