ಪಂಜಾಬ್ ನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ

ಐದು ದಿನಗಳ ಹಿಂದಷ್ಟೇ ಬಾಲಕಿ ಸಾವಿಗೆ ಕಾರಣವಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬೆನ್ನಿಗೆ ಸೋಮವಾರ ಪಂಜಾಬ್ ನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ..
ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ (ಸಾಂದರ್ಭಿಕ ಚಿತ್ರ)
ಲೈಂಗಿಕ ದೌರ್ಜನ್ಯಕ್ಕೊಳಗಾದ ಯುವತಿ (ಸಾಂದರ್ಭಿಕ ಚಿತ್ರ)

ಖನ್ನಾ: ಐದು ದಿನಗಳ ಹಿಂದಷ್ಟೇ ಬಾಲಕಿ ಸಾವಿಗೆ ಕಾರಣವಾಗಿದ್ದ ಲೈಂಗಿಕ ಕಿರುಕುಳ ಪ್ರಕರಣದ ಬೆನ್ನಿಗೆ ಸೋಮವಾರ ಪಂಜಾಬ್ ನಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬಂದಿದೆ.

ಪಂಜಾಬ್ ಖನ್ನಾ ಪ್ರದೇಶದಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕುರಿತು ಮಾಹಿತಿಗಳು ಲಭ್ಯವಾಗಿವೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಹೇಳಲಾಗುತ್ತಿದೆ. ಪಂಜಾಬ್ ಖನ್ನಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಬಸ್ ನಲ್ಲಿ ಯುವತಿ ಕುಳಿತಿದ್ದ ಸೀಟಿನ ಹಿಂದೆ ಕುಳಿತಿದ್ದ ವ್ಯಕ್ತಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ.

ಇದರಿಂದ ಬೇಸತ್ತ ಯುವತಿ ಬಸ್ ಚಾಲಕ ಮತ್ತು ನಿರ್ವಾಹಕನಿಗೆ ಈ ಬಗ್ಗೆ ಮಾಹಿತಿ ನೀಡಿದಾಗ ಇಬ್ಬರೂ ಆರೋಪಿ ವ್ಯಕ್ತಿ ಪರಾರಿಯಾಗಲು ಅನುವು ಮಾಡಿಕೊಟ್ಟರು. ಇದರಿಂದ ಆಕ್ರೋಶಗೊಂಡ ಯುವತಿ ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್ ಚಾಲಕ ಮತ್ತು ನಿರ್ವಾಹಕನನ್ನು ಬಂಧಿಸಿದ್ದಾರೆ. ಯುವತಿ ತನ್ನ ದೂರಿನಲ್ಲಿ, ಚಲಿಸುತ್ತಿದ್ದ ಬಸ್ ನಲ್ಲಿ ವ್ಯಕ್ತಿಯೋರ್ವ ನನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಇದನ್ನು ಸಹಿಸಲಾಗದೇ ನಾನು ಬಸ್ ಚಾಲಕ ಮತ್ತು ನಿರ್ವಾಹಕರಲ್ಲಿ ಸಹಾಯಕ್ಕಾಗಿ ಮೊರೆಯಿಟ್ಟೆ. ಆದರೆ ಅವರು ಸಹಾಯ ಮಾಡುವ ಬದಲು ಆರೋಪಿ ತಪ್ಪಿಸಿಕೊಳ್ಳಲು ನೆರವಾದರು ಎಂದು ಆರೋಪಿಸಿದ್ದಾರೆ. ಪರಾರಿಯಾಗಿರುವ ವ್ಯಕ್ತಿಗಾಗಿ ಪೊಲೀಸರು ಬಲೆ ಬೀಸಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

5 ದಿನಗಳ ಹಿಂದಷ್ಟೇ ಪಂಜಾಬ್ ಉಪ ಮುಖ್ಯಮಂತ್ರಿ ಬಾದಲ್ ಅವರ ಕುಟುಂಬದ ಒಡೆತನವಿರುವ ಬಸ್ ಸಂಸ್ಥೆಯ ಬಸ್ ನಲ್ಲಿ 14 ವರ್ಷದ ಬಾಲಕಿ ಮತ್ತು ಆಕೆಯ ತಾಯಿಗೆ ಲೈಂಗಿಕ ಕಿರುಕುಳ ನೀಡಲಾಗಿತ್ತು. ಕಿರುಕುಳವನ್ನು ತಪ್ಪಿಸಿಕೊಳ್ಳಲು ತಾಯಿ ಮತ್ತು ಮಗಳು ಇಬ್ಬರೂ ಚಲಿಸುತ್ತಿದ್ದ ಬಸ್ ನಿಂದಲೇ ಕೆಳಗೆ ಧುಮುಕಿದ್ದರು. ಘಟನೆಯಲ್ಲಿ 14 ವರ್ಷದ ಬಾಲಕಿ ಸಾವನ್ನಪ್ಪಿ, ತಾಯಿ ಗಂಭೀರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಇದೀಗ ಪಂಜಾಬ್ ಸರ್ಕಾರಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದ್ದು, ಇದರ ಬೆನ್ನಲ್ಲೇ ಅಂತಹುದೇ ಮತ್ತೊಂದು ಪ್ರಕರಣ ಸಂಭವಿಸಿರುವುದು ಪಂಜಾಬ್ ನಲ್ಲಿ ಕಾನೂನು ಸುವ್ಯವಸ್ಥೆಯ ಅಸ್ತಿತ್ವವನ್ನು ಪ್ರಶ್ನಿಸುವಂತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com