
ನವದೆಹಲಿ: ಅಮೇಥಿ ಫುಡ್ ಪಾರ್ಕ್ ಯೋಜನೆ ಇದೀಗ ರಾಜಕೀಯ ವಲಯದಲ್ಲಿ ಹಗ್ಗ ಜಗ್ಗಾಟಕ್ಕೆ ಕಾರಣವಾಗಿದ್ದು, ಈ ಬಾರಿ ರಾಹುಲ್ ವಿರುದ್ಧ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಾಗ್ದಾಳಿಗೆ ಮುಂದಾಗಿದ್ದಾರೆ.
ಎನ್ ಡಿಎ ಸರ್ಕಾರದ ದ್ವೇಷ ರಾಜಕೀಯದಿಂದ ಅಮೇಥಿಯಲ್ಲಿ ಆರಂಭವಾಗಬೇಕಿದ್ದ ಅಮೇಥಿ ಫುಡ್ ಪಾರ್ಕ್ ಬಲಿಯಾಯ್ತು ಎಂಬ ರಾಹುಲ್ ಗಾಂಧಿ ಅವರ ಆರೋಪಕ್ಕೆ ತಿರುಗು ಬಾಣ ಬಿಟ್ಟಿರುವ ಮನೋಹರ್ ಪರಿಕ್ಕರ್, ಸಾರ್ವಜನಿಕ ಸಂಪರ್ಕದ ವರ್ಚಸ್ಸಿಗೂ, ಸಾರ್ವಜನಿಕ ವರ್ಚಸ್ಸಿಗೂ ವ್ಯತ್ಯಾಸವಿದೆ. ಅಮೇಥಿ ಫುಡ್ ಪಾರ್ಕ್ ಯೋಜನೆ ಅಭಿವೃದ್ಧಿಗೆ ಕೈ ಜೋಡಿಸಲು ಈ ವರೆಗೂ ಯಾವುದೇ ಕಂಪನಿಗಳು ಮುಂದೆ ಬಂದಿಲ್ಲ. ರಾಹುಲ್ ಗಾಂಧಿ ಒಬ್ಬ ಪ್ರಚಾರ ಪ್ರಿಯ. ಆತನೊಬ್ಬ ಬೇಜವಾಬ್ದಾರಿಯುತ ನಾಯಕ ಎಂದು ಹೇಳಿದ್ದಾರೆ.
ಕೊರ್ವಾದಲ್ಲಿ ಸಶಸ್ತ್ರ ಕಾರ್ಖಾನೆಯನ್ನು ತೆರೆಯಲು ಕಾಂಗ್ರೆಸ್ ಪಕ್ಷ ಸುಮಾರು ರು.218 ಕೋಟಿ ಹಣವನ್ನು ಖರ್ಚು ಮಾಡಿತ್ತು. ಆದರೆ ಈ ವರೆಗೂ ಯಾವುದೇ ನಿರ್ಮಾಣ ಕಾರ್ಯಗಳು ಅಭಿವೃದ್ಧಿಗೊಂಡಿಲ್ಲ ಎಂದು ಅವರು ಹೇಳಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧ ಮತ್ತೊಬ್ಬ ಬಿಜೆಪಿ ನಾಯಕ ವಾಗ್ದಾಳಿ ನಡೆಸಿದ್ದು, ಯಾವುದೇ ಸಿದ್ಧತೆಗಳಿಲ್ಲದೆಯೇ ರಾಹುಲ್ ಗಾಂಧಿ ಚರ್ಚೆಗಳಿಗೆ ಆಗಮಿಸುತ್ತಾರೆ. ಫುಡ್ ಪಾರ್ಕ್ ಯೋಜನೆ ಸ್ಥಗಿತಗೊಂಡಿದ್ದೇ ಯುಪಿಎ ಸರ್ಕಾರ ನಿರ್ಧಾರದಿಂದ ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಗೌರವ್ ಗಗೋಯ್ ಅವರು, ಬಿಜೆಪಿಯವರು ಕೆಲಸ ಮಾಡುವುದಕ್ಕಿಂತ ಮಾರ್ಕೆಟಿಂಗ್ ಕೆಲಸ ಮಾಡುವುದರಲ್ಲೇ ಹೆಚ್ಚು ಕಾರ್ಯನಿವೃತ್ತರಾಗಿದ್ದಾರೆ. ರಕ್ಷಣಾ ಸಚಿವರು ರಾಹುಲ್ ವಿರುದ್ಧ ವೈಯಕ್ತಿಕವಾಗಿ ವಾಗ್ದಾಳಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಗುರುವಾರ ನಡೆದ ಕಲಾಪದಲ್ಲಿ ಭಾಗವಹಿಸಿದ್ದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಎನ್ ಡಿಎ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದ್ದರು. ಈ ವೇಳೆ ಎನ್ ಡಿಎ ಸರ್ಕಾರದ ದ್ವೇಷ ರಾಜಕೀಯದಿಂದ ಅಮೇಥಿಯಲ್ಲಿ ಆರಂಭವಾಗಬೇಕಿದ್ದ ಅಮೇಥಿ ಫುಡ್ ಪಾರ್ಕ್ ಬಲಿಯಾಯಿತು. ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿಗಾಗಿ ಮಾತ್ರ ರಾಜಕೀಯ ಮಾಡಿ ಎಂದು ಹೇಳಿದ್ದರು. ಅವರ ಭಾಷಣದಿಂದ ನಾನು ಪ್ರೇರೇಪಿತನಾಗಿದ್ದೆ. ಆದರೆ ಫುಡ್ ಪಾರ್ಕ್ ನಿರ್ಮಾಣ ಸ್ಥಗಿತಗೊಳಿಸಿದ್ದು ಅಭಿವೃದ್ಧಿಗಲ್ಲ, ಸೇಡಿನ ರಾಜಕೀಯಕ್ಕೆ ಎಂಬುದು ನಂತರ ನನಗೆ ತಿಳಿಯಿತು ಎಂದು ಆರೋಪ ವ್ಯಕ್ತಪಡಿಸಿದ್ದರು.
Advertisement