ಬಾಲ್ಯವಿವಾಹ ರದ್ದು ಮಾಡಿ ಎಂದ ಹುಡುಗಿಗೆ 16 ಲಕ್ಷ ದಂಡ ವಿಧಿಸಿದ ಪಂಚಾಯಿತಿ

ಬಾಲ್ಯ ವಿವಾಹ ರದ್ದು ಮಾಡಿ ಎಂದ ಬಾಲಕಿಗೆ ಗ್ರಾಮ ಪಂಚಾಯಿತಿಯೊಂದು ಬರೊಬ್ಬರಿ 16 ಲಕ್ಷ ರು. ದಂಡ ವಿಧಿಸಿದ ವಿಚಿತ್ರ ಘಟನೆ ರಾಜಸ್ತಾನದಲ್ಲಿ ನಡೆದಿದೆ.
ಬಾಲ್ಯ ವಿವಾಹ ವಿರೋಧಿ ಹೋರಾಟ (ಸಂಗ್ರಹ ಚಿತ್ರ)
ಬಾಲ್ಯ ವಿವಾಹ ವಿರೋಧಿ ಹೋರಾಟ (ಸಂಗ್ರಹ ಚಿತ್ರ)

ಜೋಧ್ ಪುರ: ಬಾಲ್ಯ ವಿವಾಹ ರದ್ದು ಮಾಡಿ ಎಂದ ಬಾಲಕಿಗೆ ಗ್ರಾಮ ಪಂಚಾಯಿತಿಯೊಂದು ಬರೊಬ್ಬರಿ 16 ಲಕ್ಷ ರು. ದಂಡ ವಿಧಿಸಿದ ವಿಚಿತ್ರ ಘಟನೆ ರಾಜಸ್ತಾನದಲ್ಲಿ ನಡೆದಿದೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಬಾಲ್ಯವಿವಾಹ ತಡೆಗೆ ಹಲವು ಕಠಿಣ ಕಾರ್ಯಕ್ರಮಗಳನ್ನು ತಂದಿದ್ದರೂ ಇತ್ತ ಊರ ಹಿರಿಯರೆಂಬ ಮುಖವಾಡ ಧರಿಸಿದ ಕೆಲವರು ಹಳೆಯ ಮೌಢ್ಯತೆಗಳನ್ನು ಜನತೆಯ ಮೇಲೆ ಒತ್ತಾಯಪೂರ್ವಕವಾಗಿ ಹೇರುತ್ತಿದ್ದಾರೆ. ಇದಕ್ಕೆ ರಾಜಸ್ತಾನದ ಜೋಧ್ ಪುರದ ರೊಹಿಚನ್ ಖುರ್ದ್ ಗ್ರಾಮದ ಬಾಲಕಿ ವಿವಾಹ ಪ್ರಕರಣ ನೈಜ
ನಿದರ್ಶನವಾಗಿದೆ.

ತನಗರಿವಿಲ್ಲದೇ ತನಗಾದ ಬಾಲ್ಯವಿವಾಹವನ್ನು ರದ್ದುಗೊಳಿಸುವಂತೆ ಕೇಳಿದ ಬಾಲಕಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಭಾರಿ ಪ್ರಮಾಣದ ದಂಡ ತೆರುವಂತೆ ಕಟ್ಟಪ್ಪಣೆ ಮಾಡಿದೆ. ಅಲ್ಲದೆ ಬಾಲ್ಯವಿವಾಹವನ್ನು ಮುರಿದ ಬಾಲಕಿ ಕುಟುಂಬಕ್ಕೆ ಸಮುದಾಯದಿಂದಲೇ ಬಹಿಷ್ಕಾರ ಹಾಕಿದೆ. ಜೋಧ್ ಪುರದ ರೊಹಿಚನ್ ಖುರ್ದ್ ಗ್ರಾಮದ ಸಂತಾದೇವಿ ಮೇಘ್ವಾಲ್ ಎಂಬ ಹುಡುಗಿ ಬಾಲ್ಯವಿವಾಹವನ್ನು ರದ್ದುಗೊಳಿಸುವಂತೆ ಕೇಳಿದ ಆರೋಪದ ಮೇಲೆ ಸ್ಥಳೀಯ ಗ್ರಾಮ ಪಂಚಾಯಿತಿ ಈ ಶಿಕ್ಷೆ ನೀಡಿದೆ.

ಇನ್ನು ಗ್ರಾಮ ಪಂಚಾಯಿತಿ ನೀಡಿರುವ ಶಿಕ್ಷೆ ವಿರುದ್ಧ ಕಿಡಿಕಾರಿರುವ ಬಾಲೆ ಸಂತಾದೇವಿ ಮೇಘ್ವಾಲ್, ಇದು ತನ್ನ ಸಂಬಂಧಿಕರ ಪಿತೂರಿಯಾಗಿದ್ದು, ನಾನು ಮದುವೆ ರದ್ದುಪಡಿಸುವುದನ್ನು ತಡೆಯಲು ವಿವಿಧ ರೀತಿಯ ಕಿರುಕುಳ ನೀಡಿದ್ದರು. ಆದರೆ ಅದಾವುದಕ್ಕೂ ನಾನು ಬಗ್ಗದೇ ಇದ್ದಾಗ ಈ ರೀತಿ ಪಂಚಾಯಿತಿ ಮೂಲಕವಾಗಿ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ.  ಪ್ರಸ್ತುತ ಸಂತಾದೇವಿ ಮೇಘ್ವಾಲ್ ಬೆಂಬಲಕ್ಕೆ ಸ್ಥಳೀಯ ಶಿಕ್ಷಣ ಸಂಸ್ಥೆ ಸಾರಥಿ ಟ್ರಸ್ಟ್ ನಿಂತಿದ್ದು, ಸಂತಾದೇವಿ ಪರವಾಗಿ ನಿಂತು ಆಕೆಗೆ ನ್ಯಾಯಕೊಡಿಸುವುದಾಗಿ ಹೇಳಿದೆ.

"ಸಂತಾದೇವಿಗೆ ಕಾನೂನು ಬಾಹಿರವಾಗಿ ದಂಡ ವಿಧಿಸಿ, ಸಮುದಾಯದಿಂದ ಬಹಿಷ್ಕರಿಸಿರುವ ಗ್ರಾಮ ಪಂಚಾಯಿತಿ ಸದಸ್ಯರ ವಿರುದ್ಧ ಕ್ರಮ ಕಾನೂನು ಕ್ರಮ ಜರುಗಿಸಲು ನಾವು ಮುಂದಾಗಿದ್ದೇವೆ. ಅಲ್ಲದೆ ನಾವು ಸಂತಾದೇವಿಯ ಸಂಬಂಧಿಕರನ್ನು ಕರೆಸಿ ಕೌನ್ಸಿಲಿಂಗ್ ಮೂಲಕವಾಗಿ ಬಾಲಕಿಗೆ ಇಷ್ಟವಿಲ್ಲದ ಈ ವಿವಾಹವನ್ನು ರದ್ದುಗೊಳಿಸಲು ಪ್ರಯತ್ನಿಸುವುದಾಗಿಸಾರಥಿ ಟ್ರಸ್ಟ್ ನ ಕೀರ್ತಿ ಭಾರತಿ ಅವರು ಹೇಳಿದ್ದಾರೆ.

ಇನ್ನು ಇಡೀ ವಿವಾದದ ಕೇಂದ್ರ ಬಿಂದು ಬಾಲಕಿ ತಂದೆ ಪದ್ಮರಾಮ್ ಅವರು ಕಲ್ಲು ಹೊಡೆಯುವವರಾಗಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ತಮ್ಮ ಮಗಳನ್ನು ಚೆನ್ನಾಗಿ ಓದಿಸ ಬೇಕು ಎಂಬ ಆಸೆ ಇದೆ. ಅಲ್ಲದೇ ಇಡೀ ಸಮಾಜ ಆಕೆಯನ್ನು ಒಳ್ಳೆಯ ರೀತಿಯಲ್ಲಿ ಗುರುತಿಸಬೇಕು ಎಂಬುದು ನಮ್ಮ ಅಭಿಲಾಶೆಯಾಗಿದೆ. ತಮ್ಮ ಮಗಳ ಮೂಲಕ ಸಮಾಜದಲ್ಲಿ ದುಷ್ಟ ಆಚರಣೆಗಳನ್ನು ತಡೆಯಬೇಕು ಎಂದು ಹೇಳಿದ್ದಾರೆ.

ಏನಿದು ಪ್ರಕರಣ?
ಸಂತಾದೇವಿ ಮೇಘ್ವಾಲ್ ಮೂಲತಃ ಜೋಧ್ ಪುರದ ಲುನಿ ತೆಹ್ಸಿಲ್ ನ ರೊಹಿಚನ್ ಖುರ್ದ್ ಗ್ರಾಮದ ನಿವಾಸಿಯಾಗಿದ್ದು, ಈಕೆ ಸುಮಾರು 11 ತಿಂಗಳ ಹಸುಗೂಸಾಗಿದ್ದಾಗಲೇ ಈಕೆಯ ಪೋಷಕರು ಮದುವೆ ನಿಶ್ಚಯಿಸಿದ್ದರು. ಕಳೆದ ಮೂರು ವರ್ಷಗಳ ಹಿಂದಷ್ಟೇ ಅಂದರೆ 2012ರಲ್ಲಿ ಈಕೆಗೆ ತನ್ನ ಸಂಬಂಧಿಕರೊಂದಿಗೆ ಮದುವೆಯಾಗಿತ್ತು. ಮದುವೆಯಾದಾಗ ಸಂತಾದೇವಿ ಮೇಘ್ವಾಲ್ ಅಪ್ರಾಪ್ತೆಯಾಗಿದ್ದಳು. ಹೀಗಾಗಿ ಬಾಲಕಿ ಮದುವೆ ಬಳಿಕವೂ ತನ್ನ ಪೋಷಕರೊಂದಿಗೆ ವಾಸಿಸುತ್ತಿದ್ದಳು. ಅಲ್ಲದೆ ಸ್ಥಳೀಯ ಖಾಸಗಿ ಸಂಸ್ಥೆಯ ಶಾಲೆಗೆ ಹೋಗುತ್ತಿದ್ದಳು. ಪ್ರಸ್ತುತ ಸಂತಾದೇವಿ ಮೇಘ್ವಾಲ್ ಪದವಿ ತರಗತಿಯಲ್ಲಿದ್ದು, ಇದೀಗ ತನ್ನ ಬಾಲ್ಯ ವಿವಾಹವನ್ನು ರದ್ದುಗೊಳಿಸುವಂತೆ ಗ್ರಾಮ ಪಂಚಾಯಿತಿಯಲ್ಲಿ ಮನವಿ ಮಾಡಿದ್ದಾಳೆ. ಆದರೆ ಇದಕ್ಕೆ ಒಪ್ಪದ ಗ್ರಾಮ ಪಂಚಾಯಿತಿ ಮದುವೆ ರದ್ದು ಮಾಡುವ ಬದಲು ಆಕೆಗೆ ಬರೊಬ್ಬರಿ 16 ಲಕ್ಷ ದಂಡ ವಿಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com