

ಚಂಡೀಗಡ: ಸ್ಪರ್ಶ ಜ್ಞಾನವೊಂದಿಲ್ಲದಿದ್ದರೆ ಈ ಮಗುವಿಗೆ ಯಾರೂ ಜೀವ ಇದೆ ಎಂದರೆ ನಂಬಲಿಕ್ಕಿಲ್ಲ. ಕೆಪ್ಪು ಕಣ್ಣು, ಮೀನನ್ನು ನೆನಪಿಸುವ ಮುಖ, ಪ್ಲಾಸ್ಟಿಕ್ ಮೇಲ್ಮೆನ ಚರ್ಮ... ಒಂದು ರೀತಿಯಲ್ಲಿ ರಸ್ತೆ ಬದಿಯಲ್ಲಿ ಮಾರಾಟಕ್ಕಿಡುವ ಪ್ಲಾಸ್ಟಿಕ್ ಡಾಲ್‍ನಂತಿದೆ ಈ ಮಗು!
ಹೌದು, ವೈದ್ಯ ಲೋಕದ ಪಾಲಿಗಿದು ಪ್ಲಾಸ್ಟಿಕ್ ಮಗು. ಅಮೃತಸರದ ರಾಜಸಾನಿಯ ಮಹಿಳೆಯೊಬ್ಬರು ಇಂಥ ವಿಚಿತ್ರ ಶಿಶುವಿಗೆ ಜನ್ಮ ನೀಡಿದ್ದಾರೆ. ಪಂಜಾಬ್‍ನ ಅಮೃತಸರ ಜಿಲ್ಲೆಯ ಗುರುನಾನಕ್ ದೇವ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಈ ಹೆಣ್ಣು ಮಗು ಜನಿಸಿದೆ. ವೈದ್ಯರ ಪ್ರಕಾರ ಈ ರೀತಿಯ ಮಕ್ಕಳು ಹುಟ್ಟುವುದು ವಿರಳ. 6 ಲಕ್ಷ ನವಜಾತ ಶಿಶುಗಳಲ್ಲಿ ಒಂದು ಮಗು ಇಂಥ ಲಕ್ಷಣ ಹೊಂದಿರುತ್ತದಂತೆ. ಇಂಥ ಮಗುವಿಗೆ ವೈಜ್ಞಾನಿಕವಾಗಿ `ಕೊಲೊಡಿಯನ್' ಎನ್ನುತ್ತಾರೆ. ಅಮೃತಸರದಲ್ಲಿ ಹುಟ್ಟಿದ ಎರಡನೇ ಮಗು ಇದು. 2014ರಲ್ಲೂ ಇಂಥದ್ದೇ ಪ್ಲಾಸ್ಟಿಕ್ ಶಿಶುವಿನ ಜನನವಾಗಿತ್ತು. ಆದರೆ, ಮಗು 3 ದಿನದಲ್ಲೇ ಅಸುನೀಗಿತ್ತು.
ವಿಚಿತ್ರ ರೂಪ
ದೂರದಿಂದ ನೋಡಿದರೆ ಈ ಮಗು ರಬ್ಬರ್ ಗೊಂಬೆಯನ್ನು ಹೋಲುತ್ತದೆ. ಮಗುವಿನ ಚರ್ಮ ಹಾವನ್ನು ಹೋಲುತ್ತದೆ. ಮುಖ ಮೀನನ್ನು ನೆನಪಿಸುತ್ತದೆ. ಕಣ್ಣು ಹಾಗೂ ತುಟಿಗಳು ಗಾಢ ಕೆಂಬಣ್ಣದಿಂದ ಕೂಡಿದೆ. ಈ ವಿಚಿತ್ರ ಮಗುವಿಗೆ ತಾಯಿ ಎದೆಹಾಲು ಕುಡಿಯಲೂ ಅಸಾಧ್ಯ ಎನ್ನುವ ಸ್ಥಿತಿ ಇದೆ ಎಂದು ಮೇಲ್ ಟುಡೇ ವರದಿ ಮಾಡಿದೆ. ಸ್ವಲ್ಪ ಮುಟ್ಟಿದರೂ ಸಾಕು, ಮಗು ಜೋರಾಗಿ ಅಳುತ್ತದೆ. ಸಾಮಾನ್ಯವಾಗಿ ಈ ರೀತಿಯ ಮಗು ಹುಟ್ಟಿದ 15-30 ದಿನಗಳೊಳಗೆ ಹಾವಿನಂತೆ ಚರ್ಮ ಕಳಚಿಕೊಳ್ಳಲಾರಂಭಿಸುತ್ತದೆ. ಇದರಿಂದ ಸೋಂಕು ಉಂಟಾಗಿ ಚರ್ಮದಲ್ಲಿ ಬಿರುಕಾಗುವ ಸಾಧ್ಯತೆಗಳಿವೆ. ಅಲ್ಲದೇ, ಪ್ಲಾಸ್ಟಿಕ್ ಮೇಲ್ಮೈಯಿಂದ ಮಗುವಿನ ಪರಿಸ್ಥಿತಿ ಶೋಚನೀಯವಾಗಿ ಬಿಡುತ್ತದೆ.
ಈ ರೀತಿಯ ಮಗು ಹುಟ್ಟುವುದು ವಿರಳ. ಈ ಶಿಶುಗಳು ಮೇಣದ ರೀತಿಯ ಹಾಗೂ ಹೊಳಪಿರುವ ಚರ್ಮ ಹೊಂದಿರುತ್ತವೆ. ಪ್ಲಾಸ್ಟಿಕ್ ಮಗು ಹೈಪೋಥರ್ಮಿಯಾ(ಲಘುಉಷ್ಣತೆ ಅಂದರೆ ದೇಹದ ಉಷ್ಣತೆ ಸಾಮಾನ್ಯಕ್ಕಿಂತ ಕಡಿಮೆಯಿರುವುದು), ಡಿಹೈಡ್ರೇಷನ್(ನಿರ್ಜಲೀಕರಣ)ದಂತಹ ಸಮಸ್ಯೆಗಳಿಂದ ನರಳುತ್ತದೆ. ದಶಕದ ಹಿಂದೆ ಇಂಥ ಮಗುವೊಂದಕ್ಕೆ ನಾನು ಚಿಕಿತ್ಸೆ ನೀಡಿದ್ದೆ. 2-3 ವಾರಗಳಿಗೊಮ್ಮೆ ಮಗುವಿನ ಚರ್ಮ ಕಳಚಿಕೊಳ್ಳುತ್ತದೆ. ಈ ಸಮಯದಲ್ಲಿ ಅದು ಬಹಳ ನೋವನುಭವಿಸುತ್ತದೆ. ಅಲ್ಲದೆ, ಕಣ್ಣಿನ ರೆಪ್ಪೆಯನ್ನು ಮುಚ್ಚುವುದೂ ಅಸಾಧ್ಯವಾಗಿ ಬಿಡುತ್ತದೆ.
-ಡಾ. ಆರ್.ಎಸ್. ಬೇಡಿ, ಮಕ್ಕಳ ತಜ್ಞ