
ನವದೆಹಲಿ: ಹೂಡಿಕೆದಾರರಿಗೆ ವಂಚಿಸಿದ ಆರೋಪದಡಿ ಜೈಲು ಸೇರಿರುವ ಸಹರಾ ಗ್ರೂಪ್ ಸಂಸ್ಥಾಪಕ ಸುಬ್ರತಾ ರಾಯ್ ಅವರ ಜಾಮೀನು ಆದೇಶವನ್ನು ಸುಪ್ರೀಂಕೋರ್ಟ್ ಕಾಯ್ದಿರಿಸಿದ್ದು, ಮತ್ತೆ ಕೆಲ ದಿನಗಳು ಕಾಲ ಸುಬ್ರತಾ ರಾಯ್ ಜೈಲಿನಲ್ಲೇ ಕಳೆಯಬೇಕಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಜಾಮೀನು ಆದೇಶವನ್ನು ಕಾಯ್ದಿರಿಸಿದ್ದು, ದಿನಾಂಕವನ್ನು ಕೋರ್ಟ್ ಪ್ರಕಟಿಸಿಲ್ಲ. ಹೀಗಾಗಿ ಕಳೆದ 1 ವರ್ಷದಿಂದ ಸೆರೆಮನೆ ವಾಸ ಅನುಭವಿಸುತ್ತಿರುವ ಅವರ ಜೈಲು ವಾಸ ಇನ್ನೂ ಮುಂದುವರೆಯಲಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಪಡೆಯಬೇಕಾದರೆ ಕೂಡಲೇ 10 ಸಾವಿರ ಕೋಟಿ ರುಪಾಯಿಯನ್ನು ಠೇವಣಿಯಾಗಿ ಇಡುವಂತೆ ಕೋರ್ಟ್ ಸಹರಾ ಗ್ರೂಪ್‌ಗೆ ಸೂಚಿಸಿತ್ತು. ಅಷ್ಟು ಮೊತ್ತದ ಹಣವನ್ನು ಠೇವಣಿಯಾಗಿ ಇಡಲು ಸಾಧ್ಯವಿಲ್ಲ. ಕೂಡಲೇ ಅಂದರೆ ಸುಮಾರು 2,500 ಕೋಟಿ ರುಪಾಯಿ ಠೇವಣಿ ಇಡುವುದಾಗಿ ಸಹರಾ ಹೇಳಿತ್ತು. ಇದರಿಂದಾಗಿ ಸುಪ್ರೀಂಕೋರ್ಟ್ ಠೇವಣಿ ಇಡುವವರೆಗೂ ಸುಬ್ರತಾ ರಾಯ್ ಜಾಮೀನು ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.
ಸಹರಾ ಸಂಸ್ಥೆಯ ಹೂಡಿಕೆದಾರರ 20 ಸಾವಿರ ಕೋಟಿ ಮೌಲ್ಯದ ಷೇರುಗಳನ್ನು ಹಿಂದಿರುಗಿಸಲು ವಿಫಲವಾದ ಹಿನ್ನೆಲೆಯಲ್ಲಿ ಹೂಡಿಕೆದಾರರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
Advertisement