
ಲಾಸ್ ವೇಗಾಸ್: ಖ್ಯಾತ ಬ್ಲೂಸ್ ಸಂಗೀತ ಮಾಂತ್ರಿಕ ರಿಲೇ ಬಿ ಕಿಂಗ್ ಅಲಿಯಾಸ್ ಬಿಬಿ ಕಿಂಗ್ ಅವರು ಲಾಸ್ ವೇಗಾಸ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗಿಟಾರ್ ಮೂಲಕ ವಿಶ್ವದ ಲಕ್ಷಾಂತರ ಸಂಗೀತ ಪ್ರಿಯರನ್ನು ಆಕರ್ಷಿಸಿದ್ದ ಬ್ಲೂಸ್ ಸಂಗೀತ ಮಾಂತ್ರಿಕ ಬಿಬಿ ಕಿಂಗ್ ನಿಧನರಾಗಿದ್ದು, ಅವರಿಗೆ 89 ವರ್ಷ ವಯಸ್ಸಾಗಿತ್ತು. ಅಮೆರಿಕದ ಲಾಸ್ ವೇಗಾಸ್ ನಲ್ಲಿ ನಿನ್ನೆ ಊಟ ಮಾಡಿ ನಿದ್ರೆ ಮಾಡುತ್ತಿದ್ದ ಬಿಬಿ ಕಿಂಗ್ ಅವರು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಅವರ ವಕ್ತಾರ ಬ್ರೆಂಟಿ ಬ್ರೈಸನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಮ್ಮ ಬ್ಲೂಸ್ ಸಂಗೀತದಿಂದಲೇ ವಿಶ್ವವಿಖ್ಯಾತಿ ಗಳಿಸಿದ್ದ ಬಿಬಿ ಕಿಂಗ್, 15 ಬಾರಿ ಗ್ರಾಮಿ ಪ್ರಶಸ್ತಿ ಪಡೆಯುವ ಮೂಲಕ ದಾಖಲೆ ಬರೆದಿದ್ದರು. ತಮ್ಮ ಇಳಿವಯಸ್ಸಿನಲ್ಲಿಯೂ ಸಂಗೀತವನ್ನು ಬಿಡಲೊಪ್ಪದ ಅವರು 2012ರಿಂದೀಚೆಗೆ ಸಾಕಷ್ಟು ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ತಮ್ಮ 80 ರ ಇಳಿವಯಸ್ಸಿನಲ್ಲಿಯೇ ಅವರು ಸುಮಾರು 50 ಆಲ್ಬಮ್ ಗಳನ್ನು ಮಾಡುವ ಮೂಲಕ ದಾಖಲೆ ಬರೆದಿದ್ದರು. ಬಳಿಕ ಸುಮಾರು 250ಕ್ಕೂ ಹೆಚ್ಚು ಸಂಗೀತ ಮೇಳಗಳನ್ನು ನಡೆಸಿಕೊಟ್ಟಿದ್ದರು.
ಕಳೆದ ಹಲವು ವರ್ಷಗಳಿಂದ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದ ಬಿಬಿ ಕಿಂಗ್, ಕಳೆದ ಅಕ್ಟೋಬರ್ ನಲ್ಲಿ ಚಿಕಾಗೋದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ವೇದಿಕೆಯಲ್ಲಿಯೇ ಕುಸಿದು ಬಿದಿದ್ದರು. ಬಳಿಕ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗಿತ್ತು. ತೀವ್ರ ಬಳಲಿಕೆ ಮತ್ತು ದೇಹದ ನಿರ್ಜಲೀಕರಣದಂತಹ ಸಮಸ್ಯೆಗಳಿಂದ ಬಳಲುತ್ತಿದ್ದ ಅವರನ್ನು ವೈದ್ಯರ ಸಲಹೆ ಮೇರೆಗೆ ಲಾಸ್ ವೇಗಾಸ್ ನ ಅವರ ನಿವಾಸಕ್ಕೆ ಕಳುಹಿಸಲಾಗಿತ್ತು.
ನಿನ್ನೆ ಅವರು ನಿದ್ರೆಯಲ್ಲಿಯೇ ಚಿರ ನಿದ್ರೆಗೆ ಜಾರಿದ್ದಾರೆ. ಬಿಬಿ ಕಿಂಗ್ ಅವರಿಗೆ ಓರ್ವ ಪುತ್ರಿ ಇದ್ದು, ಶಿರ್ಲಿ ಕಿಂಗ್ ಎಂದು. ಶಿರ್ಲಿ ಕೂಡ ಬ್ಲೂಸ್ ಸಂಗೀತದಲ್ಲಿ ಅಮೆರಿಕದಲ್ಲಿ ಖ್ಯಾತಿ ಗಳಿಸಿದ್ದಾರೆ.
Advertisement