ವಿವಾದಿತ ಭೂ ಕಾಯ್ದೆ: ಜಂಟಿ ಸಂಸದೀಯ ಸಮಿತಿಗೆ ಅಹ್ಲುವಾಲಿಯಾ ಅಧ್ಯಕ್ಷ..?

ಕೇಂದ್ರದ ಎನ್ ಡಿಎ ಸರ್ಕಾರದ ವಿವಾದಿತ ಭೂ ಸ್ವಾಧೀನ ಕಾಯ್ದೆಗೆ ಸಂಬಂಧಿಸಿದಂತೆ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿಗೆ ಮಾಜಿ ಕೇಂದ್ರ ಸಚಿವರ ಎಸ್ ಎಸ್ ಅಹ್ಲುವಾಲಿಯಾ ಅವರು...
ಮಾಜಿ ಕೇಂದ್ರ ಸಚಿವ ಎಸ್ ಎಸ್ ಅಹ್ಲುವಾಲಿಯಾ (ಸಂಗ್ರಹ ಚಿತ್ರ)
ಮಾಜಿ ಕೇಂದ್ರ ಸಚಿವ ಎಸ್ ಎಸ್ ಅಹ್ಲುವಾಲಿಯಾ (ಸಂಗ್ರಹ ಚಿತ್ರ)

ನವದೆಹಲಿ: ಕೇಂದ್ರದ ಎನ್ ಡಿಎ ಸರ್ಕಾರದ ವಿವಾದಿತ ಭೂ ಸ್ವಾಧೀನ ಕಾಯ್ದೆಗೆ ಸಂಬಂಧಿಸಿದಂತೆ ರಚನೆಯಾಗಿರುವ ಜಂಟಿ ಸಂಸದೀಯ ಸಮಿತಿಗೆ ಮಾಜಿ ಕೇಂದ್ರ ಸಚಿವರ ಎಸ್ ಎಸ್ ಅಹ್ಲುವಾಲಿಯಾ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.

ಸಂಸತ್ ಮೂಲಗಳು ತಿಳಿಸಿರುವಂತೆ ಡಾರ್ಜಲಿಂಗ್ ಕ್ಷೇತ್ರದ ಸಂಸದರಾಗಿರುವ ಎಸ್ ಎಸ್ ಅಹ್ಲುವಾಲಿಯಾ ಅವರು 30 ಸದಸ್ಯ ಬಲದ ಜಂಟಿ ಸಂಸದೀಯ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ. ಎನ್ ಡಿಎ ಬೆಂಬಲಿತ ಶಿವಸೇನೆ, ಸ್ವಾಭಿಮಾನಿ ಪಕ್ಷದ ಕೆಲ ಸದಸ್ಯರು ಸೇರಿದಂತೆ ವಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಭೂ ಸ್ವಾಧೀನ ಕಾಯ್ದೆ ಈಗಾಗಲೇ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಂಡನೆಯಾಗಿದ್ದು, ಕಾಯ್ದೆಯ ಸಾಧಕ-ಭಾದಕಗಳನ್ನು ತಿಳಿದು ವರದಿ ನೀಡಲು ಈ ಮೂವತ್ತು ಮಂದಿಯ ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡಲಾಗಿದೆ. ಇನ್ನು ನೂತನ ಸಮಿತಿಯು ಕಾಯ್ದೆ ಕುರಿತಂತೆ ಅಧ್ಯಯನ ನಡೆಸಿ ಮಾನ್ಸೂನ್ ನಲ್ಲಿ ನಡೆಯಲಿರುವ ಮೊದಲ ಕಲಾಪದ ವೇಳೆಗೆ ತನ್ನ ವರದಿಯನ್ನು ನೀಡಲಿದೆ.

ಇನ್ನು ಈ ವಿವಾದಿತ ಭೂ ಸ್ವಾಧೀನ ಕಾಯ್ದೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ಗುರಿಯಾಗಿಸಿಕೊಂಡಿರುವ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಮೋದಿ ನೇತೃತ್ವದ ಎನ್ ಡಿಎ ಸರ್ಕಾರವನ್ನು ರೈತ ವಿರೋಧಿ ಸರ್ಕಾರ ಎಂದು ಬಿಂಬಿಸುತ್ತಿದೆ. ಇನ್ನು ಜಂಟಿ ಸಂಸದೀಯ ಸಮಿತಿಗೆ 20 ಲೋಕಸಭಾ ಸದಸ್ಯರು ಮತ್ತು 10 ಮಂದಿ ರಾಜ್ಯ ಸಭಾ ಸದಸ್ಯರು ಸದಸ್ಯರಾಗಿ ಆಯ್ಕೆಯಾಗಿದ್ದು, ಲೋಕಸಭೆಯಿಂದ ಕಾಂಗ್ರೆಸ್ ಪಕ್ಷದ ಕೆವಿ ಥಾಮಸ್, ರಾಜೀವ್ ಸತವ್, ಶಿವಸೇನೆಯ ಆನಂದ್ ರಾವ್ ಅಡ್ಸುಲ್, ತೃಣಮೂಲ ಕಾಂಗ್ರೆಸ್ ನ ಕಲ್ಯಾಣ್ ಬ್ಯಾನರ್ಜಿ, ಬಿಜೆಪಿಯ ಬಿ ಮೊಹತಬ್, ಎಸ್ ಎಸ್ ಅಹ್ಲುವಾಲಿಯಾ, ಉದಿತ್ ರಾಜ್, ಅನುರಾಗ್ ಠಾಕೂರ್, ಗಣೇಶ್ ಸಿಂಗ್, ಸಿಪಿಐಎಂ ನ ಮೊಹಮದ್ ಸಲೀಂ, ಎಲ್ ಜೆಪಿಯ ಚಿರಾಗ್ ಪಾಸ್ವಾನ್ ಸೇರಿದಂತೆ ಪ್ರಮುಖರು ಸದಸ್ಯರಾಗಿದ್ದಾರೆ.

ಇನ್ನು ರಾಜ್ಯಸಭೆಯ ವತಿಯಿಂದ ಬಿಜೆಪಿಯ ರಾಮ್ ನರೇನ್ ದುದಿ, ಕಾಂಗ್ರೆಸ್ ಪಕ್ಷದಿಂದ ಜೈರಾಮ್ ರಮೇಶ್, ಪಣ್ಣಾ ಲಾಲ್ ಪುನಿಯಾ ಮತ್ತು ದಿಗ್ವಿಜಯ್ ಸಿಂಗ್, ಎಸ್ ಪಿಯಿಂದ ರಾಮ್ ಗೋಪಾಲ್ ಯಾದವ್, ಜೆಡಿಯು ಪಕ್ಷದಿಂದ ಶರದ್ ಯಾದವ್, ಎನ್ ಸಿಪಿ ಯಿಂದ ಶರದ್ ಪವಾರ್, ಟಿಎಂಸಿ ಪಕ್ಷದಿಂದ ಡರೇರ್ ಒಬ್ರಿಯಾನ್, ಬಿಎಸ್ ಪಿಪಕ್ಷದಿಂದ ರಾಜ್ ಪಾಲ್ ಸಿಂಗ್ ಸೈನಿ ಅವರು ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರದ ಎನ್ ಡಿಎ ಸರ್ಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವನೆ ಸಲ್ಲಿಸುತ್ತಿದ್ದಂತೆಯೇ ಕಾಂಗ್ರೆಸ್ ಸೇರಿದಂತೆ ಹಲವು ಪ್ರತಿಪಕ್ಷಗಳು ಸರ್ಕಾರದ ನಡೆ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಸರ್ಕಾರದ ಈ ನಡೆಯಿಂದಾಗಿ ರೈತರಿಗೆ ಅನ್ಯಾಯವಾಗಲಿಗೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದವು. ವಿವಾದಿತ ತಿದ್ದುಪಡಿಗೆ ಉಭಯ ಕಲಾಪಗಳು ಕೂಡ ಬಲಿಯಾಗಿತ್ತು. ಹೀಗಾಗಿ ಅಂತಿಮವಾಗಿ ಕೇಂದ್ರ ಸರ್ಕಾರ ಈ ಭೂಸ್ವಾಧೀನ ಕಾಯ್ದೆಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿ ವರದಿ ನೀಡಲು ಜಂಟಿ ಸಂಸದೀಯ ಸಮಿತಿಯನ್ನು ರಚನೆ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com