

ಹೈದರಾಬಾದ್: ಪ್ರೀತಿಯನ್ನು ನಿರಾಕರಿಸಿದ ಸಹ ವಿದ್ಯಾರ್ಥಿ ಮೇಲೆ ಭಗ್ನ ಪ್ರೇಮಿಯೊಬ್ಬ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ಸೈದಾಬಾದಿನ ಕಾಲೇಜುವೊಂದರಲ್ಲಿ ಎಂಬಿಎ ವ್ಯಾಸಂಗ ಮಾಡುತ್ತಿದ್ದ ಯುವಕನೊಬ್ಬ ಸಹ ವಿದ್ಯಾರ್ಥಿಯನ್ನು ವಿವಾಹವಾಗುವಂತೆ ಪೀಡಿಸುತ್ತಿದ್ದ ಈ ಪ್ರಸ್ತಾಪವನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ದುಷ್ಕೃತ್ಯ ಎಸಗಿದ್ದಾನೆ.
ಪ್ರಸ್ತುತ ಅಂತಿಮ ವರ್ಷವಾಗಿದ್ದರಿಂದ ಯುವಕ ಯುವತಿಗೆ ಮಾತುಕತೆಗೆಂದು ಕರೆದಿದ್ದಾನೆ. ಈ ವೇಳೆ ವಿವಾಹ ಪ್ರಸ್ತಾಪವನ್ನು ಮುಂದಿಟ್ಟಿದ್ದಾನೆ. ಇದನ್ನು ಯುವತಿ ನಿರಾಕರಿಸುತ್ತಿದ್ದಂತೆ ಮೊದಲೇ ಸಿದ್ದನಾಗಿ ಬಂದಿದ್ದ ಯುವಕ ಆಕೆಯ ಮೈ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಬಳಿಕ ಆತನು ಸಹ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿರುವ ಯುವತಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಸೈದಾಬಾದ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.