ದೆವ್ವಕ್ಕೆ ಮಕ್ಕಳ ಕಿರು ಬೆರಳು ಬಲಿ: ಉತ್ತರ ಪ್ರದೇಶದಲ್ಲಿ ಅಮಾನವೀಯ ಆಚರಣೆ

ತಂತ್ರಜ್ಞಾನದಲ್ಲಿ ಪ್ರಪಂಚ ಎಷ್ಟೇ ಮುಂದುವರಿದ್ರೂ ನಮ್ಮ ದೇಶದಲ್ಲಿನ ಕೆಲವು ಹಳ್ಳಿಗಳಲ್ಲಿ ಮೂಢ ನಂಬಿಕೆ ಮಾತ್ರ ಬದಲಾಗುತ್ತಲೇ ಇಲ್ಲ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಹಾರಾಜಗಂಜ್: ಪ್ರಪಂಚ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದ್ರೂ ನಮ್ಮ ದೇಶದಲ್ಲಿನ ಕೆಲವು ಹಳ್ಳಿಗಳ ಮೂಢ ನಂಬಿಕೆ ಮಾತ್ರ ಬದಲಾಗುತ್ತಲೇ ಇಲ್ಲ. ಆಧುನಿಕ ಯುಗದಲ್ಲೂ ದೆವ್ವ, ಭೂತ, ಪವಾಡ ಎಂದು ನಂಬುವ ಜನ ಅದಕ್ಕಾಗಿ ಏನೆಲ್ಲಾ ಮಾಡ್ತಾರೆ ಎನ್ನೋದಕ್ಕೆ ಈ ಘಟನೆಯೇ ಸಾಕ್ಷಿ.
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ದೆವ್ವದ ಕಾಟಕ್ಕೆ ಹೆದರಿ ಮಕ್ಕಳ ಕಿರುಬೆರಳನ್ನೇ ಬಲಿ ಕೊಡುತ್ತಾರೆ.
ಜಮೊಗ ಎಂಬ ಭೂತ ಮಕ್ಕಳನ್ನು ಆವರಿಸುತ್ತಂತೆ. ಅದು ದೇಹ ಸೇರಿದ್ರೆ ಶರೀರದ ಬಣ್ಣ ಬದಲಾಗುತ್ತದೆ. ಧ್ವನಿಯಲ್ಲಿ ಏರುಪೇರು, ಕೈ ಕಾಲುಗಳು ಗಟ್ಟಿಗೊಳ್ಳುತ್ತವೆ. ಹಸುಗೂಸುಗಳು ಪದೇ ಪದೇ ಮಲ ವಿಸರ್ಜನೆ ಮಾಡಿಕೊಳ್ಳುತ್ತಿರುತ್ತವೆ. ಜಮೊಗ ಮಕ್ಕಳ ದೇಹ ಸೇರಿದ್ರೆ ಸಾವು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಇದೆ. ಹೀಗಾಗಿ  ಮಕ್ಕಳನ್ನು ರಕ್ಷಿಸಲು ಕುದಿಯುತ್ತಿರುವ ಸಾಸಿವೆ ಎಣ್ಣೆಗೆ ಮಕ್ಕಳ ಕಿರುಬೆರಳನ್ನು ಅದ್ದುತ್ತಾರೆ. ಮಕ್ಕಳು ಅದರ ನೋವಿಗೆ ಜೋರಾಗಿ ಕಿರುಚಿಕೊಂಡಾಗ, ಜಮೊಗ ದೆವ್ವ ಶಿಶುವಿನ ದೇಹದಿಂದ ಬಿಡುಗಡೆ ಹೊಂದಿತ್ತೆಂದು ನಂಬುತ್ತಾರೆ. ತಮ್ಮ ಮಕ್ಕಳನ್ನು ರಕ್ಷಿಸಿಕೊಳ್ಳಲು ಈ ಆಚರಣೆ ಮಾಡುವುದಾಗಿ ಇಲ್ಲಿನ ಜನ ಹೇಳುತ್ತಾರೆ.
ಜೀವಾ ಗ್ರಾಮದ ರಮಾದೇವಿ ತನ್ನ 5 ತಿಂಗಳ ಮಗುವಿನ ಕಿರುಬೆರಳನ್ನು ಕುದಿಯುವ ಎಣ್ಣೆಯಲ್ಲಿ ಅದ್ದಿ ತನ್ನ ಮಗುವಿನ ರಕ್ಷಣೆ ಮಾಡಿದ್ದಾಗಿ ಹೇಳಿದ್ದಾರೆ.
ಆದರೆ ಆರೋಗ್ಯ ತಜ್ಞರ ಪ್ರಕಾರ ಇದೊಂದು ಮಾನಸಿಕ ರೋಗ. ಮಕ್ಕಳು ಹುಟ್ಟಿದ ಮೊದಲ ಆರು ತಿಂಗಳೊವರೆಗೆ ಕಳೆಗುಂದಿದ್ದು, ಬಲಹೀನತೆಯಿಂದ ಇರುತ್ತವೆ. ಇದನ್ನೆ ಇಲ್ಲಿನ ಜನ ಭೂತ ಚೇಷ್ಟೆ ಎಂಬ ಮೂಢನಂಬಿಕೆಯಿಂದ ಮಕ್ಕಳ ಕಿರುಬೆರಳು ಬಲಿ ಕೊಡುತ್ತಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮದ್ಯ ಹಾಗೂ ಪೂರ್ವ ಉತ್ತರ ಪ್ರದೇಶ ಭಾಗಗಳಲ್ಲಿ ಇಂಥ  ಅಮಾನವೀಯ ಆಚರಣೆ ಇಂದಿಗೂ ಜಾರಿಯಲ್ಲಿದ್ದೂ ದೆವ್ವದ ಹೆಸರಲ್ಲಿ ಮಕ್ಕಳಿಗೆ ಕಿರುಕುಳ ನೀಡಲಾಗುತ್ತದೆ. ಇದುವರೆಗೂ ಈ ಜಮೊಗ ದೆವ್ವದ ಹೆಸರಿನಲ್ಲಿ ಸರಿ ಸುಮಾರು 70 ಸಾವಿರ ಮಕ್ಕಳು ತಮ್ಮ ಕಿರುಬೆರಳು ಕಳೆದುಕೊಂಡಿದ್ದಾರೆ ಎಂದು ಸಾಮಾಜಿಕ ತಜ್ಞರು ಅಂದಾಜಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com