ಚೀನಾ ದ್ವಿಮುಖ ನೀತಿಗಳ ಬಗ್ಗೆ ಎಚ್ಚರವಿರಲಿ: ಪ್ರಧಾನಿಗೆ ಶಿವಸೇನೆ ಸಲಹೆ

ಚೀನಾ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಚೀನಾದ ದ್ವಿಮುಖ ನೀತಿಗಳ ಬಗ್ಗೆ ಶಿವಸೇನೆ ಎಚ್ಚರಿಕೆ ನೀಡಿದೆ.
ಚೀನಾದಲ್ಲಿ ಪ್ರಧಾನಿ ನರೇಂದ್ರ ಮೋದಿ(ಸಾಂದರ್ಭಿಕ ಚಿತ್ರ)
ಚೀನಾದಲ್ಲಿ ಪ್ರಧಾನಿ ನರೇಂದ್ರ ಮೋದಿ(ಸಾಂದರ್ಭಿಕ ಚಿತ್ರ)

ಮುಂಬೈ: ಚೀನಾ ಪ್ರವಾಸವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ಚೀನಾದ ದ್ವಿಮುಖ ನೀತಿಗಳ ಬಗ್ಗೆ ಶಿವಸೇನೆ ಎಚ್ಚರಿಕೆ ನೀಡಿದೆ.

ಬೆನ್ನಿಗೆ ಚೂರಿಹಾಕುವ ಸಿದ್ಧಾಂತದಲ್ಲಿ ಚೀನಾ ನಂಬಿಕೆ ಇಟ್ಟಿದ್ದು, ಅಲ್ಲಿನ ದ್ವಿಮುಖ ನೀತಿಗಳ ಬಗ್ಗೆ ಎಚ್ಚರದಿಂದ ಇರಬೇಕೆಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಹೇಳಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿದ್ದ ಚೀನಾ, ಜಮ್ಮು-ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ ರಹಿತವಾದ ಭಾರತದ ನಕ್ಷೆ ಪ್ರದರ್ಶಿಸಿತ್ತು ಇದರಿಂದಲೇ ಚೀನಾ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂದುಬುದು ಸ್ಪಷ್ಟವಾಗಿದೆ ಎಂದು ಶಿವಸೇನೆ ಅಭಿಪ್ರಾಯಪಟ್ಟಿದೆ.

ಅರುಣಾಚಲ ಪ್ರದೇಶ ಹಾಗೂ ಜಮ್ಮು-ಕಾಶ್ಮೀರದ ವಿಷಯದಲ್ಲಿ ಚೀನಾ ತನ್ನ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂಬ ಅಂಶವನ್ನು ಭಾರತ ಅರ್ಥ ಮಾಡಿಕೊಳ್ಳಬೇಕು ಎಂದು ಪ್ರಧಾನಿಗೆ ಸಲಹೆ ನೀಡಿದ್ದು, ಕಾಶ್ಮೀರ ವಿವಾದದಲ್ಲಿ ಚೀನಾ ಪಾಕಿಸ್ತಾನಕ್ಕೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಚೀನಾಕ್ಕೆ ತೆರಳಿದ್ದಾಗ ಜಮ್ಮು-ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶ ರಹಿತವಾದ ಭಾರತದ ನಕ್ಷೆ ಪ್ರದರ್ಶಿಸಿದಂತೆ, ಚೀನಾ ಅಧ್ಯಕ್ಷರು ಭಾರತಕ್ಕೆ ಬಂದಾಗ ಟಿಬೆಟ್ ರಹಿತ ಚೀನಾ ನಕ್ಷೆಯನ್ನು ಪ್ರದರ್ಶಿಸಲು ನಮ್ಮಿಂದ ಸಾಧ್ಯವೇ ಎಂದು ಶಿವಸೇನೆ ಪ್ರಶ್ನಿಸಿದೆ.

ಪಾಕಿಸ್ತಾನಕ್ಕೆ ಚೀನಾ ಅಣ್ವಸ್ತ್ರಗಳಿಂದ ಹಿಡಿದು ಆರ್ಥಿಕ ನೆರವಿನವರೆಗೂ ಎಲ್ಲಾ ರೀತಿಯ ಸಹಾಯ ಮಾಡುತ್ತಿದೆ. ಪಾಕಿಸ್ತಾನಕ್ಕೆ ಭಯೋತ್ಪಾದನೆಯನ್ನು ಹೊರತು ಪಡಿಸಿ ತನ್ನದೆಂದು ಹೇಳಿಕೊಳ್ಳಲು ಏನೂ ಇಲ್ಲ. 1962 ರಲ್ಲಿ ಭಾರತ ಹಿಂದಿ ಚೀನಿ ಭಾಯಿ-ಭಾಯಿ ಎಂದು ಸ್ಲೋಗನ್ ಹಿಡಿದು ನಿಂತಿದ್ದರೆ ಚೀನಾ ಭಾರತದ ಮೇಲೆ ಅಕ್ರಮಣ ಮಾಡಿ ನಮ್ಮ ಭೂಭಾಗವನ್ನು ವಶಪಡಿಸಿಕೊಂಡಿತ್ತು. ಈ ಘಟನೆಯನ್ನು ಭಾರತ ಎಂದಿಗೂ ಮರೆಯಬಾರದು ಎಂದು ಶಿವಸೇನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆ ನೀಡಿದೆ.  

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com