ಮೋದಿ ಸರ್ಕಾರಕ್ಕೆ ಶೂನ್ಯ ಅಂಕ ನೀಡಿದ ರಾಹುಲ್ ಗಾಂಧಿ
ಅಮೇಥಿ/ನವದೆಹಲಿ: ರೈತರು, ಕಾರ್ಮಿಕರನ್ನು ಕಡೆಗಣಿಸಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಒಂದು ವರ್ಷದ ಸಾಧನೆಗೆ ಕಾಂಗ್ರೆಸ್ ಉಪಾಧ್ಯಕ್ಷ ನೀಡಿದ ಅಂಕ ಹತ್ತರಲ್ಲಿ `ಸೊನ್ನೆ'!
`ರೈತರು ಮತ್ತು ಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ನಾನು ಮೋದಿ ಸರ್ಕಾರಕ್ಕೆ ಹತ್ತರಲ್ಲಿ ಸೊನ್ನೆ ಅಂಕ ನೀಡುತ್ತೇನೆ. ಆದರೆ, ಕೆಲವು ಉದ್ಯಮಪತಿಗಳು ಹಾಗೂ ಕಾರ್ಪೊರೇಟ್ ಕಂಪನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡಿದರೆ ಹತ್ತರಲ್ಲಿ ಹತ್ತು ಅಂಕ ನೀಡುತ್ತೇನೆ' ಎಂದು ರಾಹುಲ್ ಹೇಳಿದ್ದಾರೆ.
ತಮ್ಮ ಸ್ವಕ್ಷೇತ್ರ ಅಮೇಠಿಗೆ ತೆರಳುವ ಮಾರ್ಗ ಮಧ್ಯೆ ಎದುರಾದ ಪತ್ರಕರ್ತರು ಮೋದಿ ಸರ್ಕಾರದ ವರ್ಷದ ಸಾಧನೆಗೆ ಎಷ್ಟು ಅಂಕ ನೀಡುತ್ತೀರಿ? ಎಂದು ಕೇಳಿದಾಗ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ದ್ವೇಷದ ರಾಜಕಾರಣ:
ಅಮೇಠಿಯಲ್ಲಿ ಆರಂಭಿಸಲುದ್ದೇಶಿಸಿರುವ ಮೆಗಾ ಫುಡ್ ಪಾರ್ಕ್ ಅನ್ನು ರದ್ದು ಮಾಡಿದ ಸರ್ಕಾರದ ನಿರ್ಧಾರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರಾಹುಲ್, ಮೋದಿ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ತಮ್ಮ ಸ್ವಕ್ಷೇತ್ರ ಅಮೇಠಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರದ ತಿರುಗೇಟು:
ರಾಹುಲ್ ಆರೋಪಕ್ಕೆ ತಿರುಗೇಟು ನೀಡಿರುವ ಕೇಂದ್ರ ಸರ್ಕಾರ, ಫುಡ್ ಪಾರ್ಕ್ ಆರಂಭ ಮಾಡದಿರಲು ಹಿಂದಿನ ಯುಪಿಎ ಸರ್ಕಾರ ಕಾರಣ. ಆ ಸರ್ಕಾರದ ಅವಧಿಯಲ್ಲೇ ಅನುಮತಿ ನಿರಾಕರಿಸಲಾಗಿತ್ತು ಎಂದು ಕೇಂದ್ರ ಆಹಾರ ಸಂಸ್ಕರಣಾ ಸಚಿವೆ ಹರ್‍ಸಿಮ್ರತ್ ಕೌರ್ ಬಾದಲ್ ಸೋಮವಾರ ತಿಳಿಸಿದ್ದಾರೆ. ಅದಕ್ಕೆ ಪೂರಕವಾಗಿ ಅನುಮತಿ ನಿರಾಕರಿಸಿದ ಪತ್ರವನ್ನೂ ಅವರು ಬಿಡುಗಡೆ ಮಾಡಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ