ಮದರಸಾಗಳು ಅಜ್ಞಾನದ ವಿಶ್ವವಿದ್ಯಾಲಯ: ಪಾಕಿಸ್ತಾನ ಸಚಿವ

ಪಾಕಿಸ್ತಾನದ ಸಚಿವರೊಬ್ಬರು ಮದರಸಾಗಳ ಬಗ್ಗೆ "ಅಜ್ಞಾನದ ವಿಶ್ವವಿದ್ಯಾಲಯಗಳು" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಮಾಹಿತಿ ಸಚಿವ ಪರ್ವೇಜ್ ರಶೀದ್
ಪಾಕಿಸ್ತಾನ ಮಾಹಿತಿ ಸಚಿವ ಪರ್ವೇಜ್ ರಶೀದ್

ಇಸ್ಲಾಮಾಬಾದ್: ಪಾಕಿಸ್ತಾನದ ಸಚಿವರೊಬ್ಬರು ಮದರಸಾಗಳ ಬಗ್ಗೆ "ಅಜ್ಞಾನದ ವಿಶ್ವವಿದ್ಯಾಲಯಗಳು" ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಪಾಕ್ ನ ಮಾಹಿತಿ ಸಚಿವ ಪರ್ವೇಜ್ ರಶೀದ್ ಅವರು ಮದರಸಾಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ನಾವು ದೇಣಿಗೆ ಹಾಗೂ ನೆರವು ನೀಡುತಿರುವ ಮದರಸಾಗಳೆಂಬ ಈ ಅಜ್ಞಾನದ ವಿಶ್ವವಿದ್ಯಾನಿಲಯಗಳಾಗಿದ್ದು, ದ್ವೇಷ ಮತ್ತು ಸಾಂಪ್ರದಾಯಕತೆಯ ಸಿದ್ಧಾಂತವನ್ನು ಸಮಾಜದ ಮೇಲೆ ಹೇರುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.   

ಮದರಸಾಗಳ ಬಗ್ಗೆ ಪಾಕ್ ಸಚಿವರು ನೀಡಿರುವ ಹೇಳಿಕೆ ಬಗ್ಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂಬ ಆಗ್ರಹ ವ್ಯಾಪಕವಾಗಿ ಕೇಳಿಬರುತ್ತಿದೆ. ಪ್ರಮುಖವಾಗಿ ಮದರಸಾಗಳನ್ನು ನಡೆಸುತ್ತಿರುವ ಕೆಲವು ಕಟ್ಟಾ ಸಂಪ್ರದಾಯವಾದಿಗಳು ಕೆಂಡಾಮಂಡಲರಾಗಿದ್ದು ಸಚಿವರನ್ನು ಸ್ವಧರ್ಮ ದ್ವೇಷಿ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲದೇ ಬೀದಿಗಿಳಿದು ಹೋರಾಟ ನಡೆಸಲು ಪ್ರಾರಂಭಿಸಿರುವ ಅವರು, ಸಚಿವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಮಾಹಿತಿ ಸಚಿವ ಪರ್ವೇಜ್ ರಶೀದ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಭಯೋತ್ಪಾದನೆ ಹಾಗೂ ದ್ವೇಷವನ್ನು ಬಿತ್ತುತಿರುವ ಶಾಲೆಗಳ ಬಗ್ಗೆ ಮಾತ್ರ ಪರ್ವೇಜ್ ರಶೀದ್ ಈ ಹೇಳಿಕೆ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿರುವ 20,೦೦೦ ಸೆಮಿನರಿಗಳ ಪೈಕಿ ಕೇವಲ ಶೇ. 3-4 ರಷ್ಟು ಸೆಮಿನರಿಗಳು ನೇರವಾಗಿ ಭಯೋತ್ಪಾದನೆಗೆ ಸಹಕಾರ ನೀಡುತ್ತಿವೆ ಎಂದು ರಕ್ಷಣಾ ಸಚಿವರು ತಿಳಿಸಿದ್ದಾರೆ. ತಮ್ಮ ಹೇಳಿಕೆ ಬಗ್ಗೆ ಸಚಿವರು ಕ್ಷಮೆ ಯಾಚಿಸಿರುವುದರಿಂದ ಈ ವಿವಾದವನ್ನು ಕೈಬಿಡುವಂತೆ ಪಾಕ್ ನ  ಕಟ್ಟಾ ಸಂಪ್ರದಾಯವಾದಿ ನಾಯಕರಿಗೆ ರಕ್ಷಣಾ ಸಚಿವರು ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com