ರಸ್ತೆಗಿಳಿದ ಯುದ್ಧ ವಿಮಾನ

ಭಾರತೀಯ ಸೇನೆಗೆ ಸೇರಿದ ಯುದ್ಧ ವಿಮಾನವೊಂದು ಗುರುವಾರ ದೆಹಲಿಯ ರಸ್ತೆಯ ಮೇಲೆ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡಿದೆ...
ಟೇಕ್ ಆಫ್ ಆಗುತ್ತಿರುವ ಮೀರಜ್ ಲಘು ಯುದ್ಧ ವಿಮಾನ
ಟೇಕ್ ಆಫ್ ಆಗುತ್ತಿರುವ ಮೀರಜ್ ಲಘು ಯುದ್ಧ ವಿಮಾನ

ನವದೆಹಲಿ: ಭಾರತೀಯ ಸೇನೆಗೆ ಸೇರಿದ ಯುದ್ಧ ವಿಮಾನವೊಂದು ಗುರುವಾರ ದೆಹಲಿಯ ರಸ್ತೆಯ ಮೇಲೆ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಮಾಡಿದೆ.

ಆಶ್ಚರ್ಯ ಎನಿಸಿದರೂ ಇದು ನಿಜ. ಭಾರತೀಯ ವಾಯುಸೇನೆಗೆ ಸೇರಿದ ಮೀರಜ್ 2000 ಲಘು ಯುದ್ಧ ವಿಮಾನವು ದೆಹಲಿ ಹೊರವಲಯದಲ್ಲಿರುವ ಯಮುನಾ ಎಕ್ಸಪ್ರೆಸ್ ವೇನಲ್ಲಿ ಇಳಿಯುವ ಮೂಲಕ ಆಶ್ಚರ್ಯಕ್ಕೆ ಕಾರಣವಾಗಿದೆ. ಹಾಗಂತ ಇದೇನು ತುರ್ತು ಲ್ಯಾಂಡಿಂಗ್ ಅಲ್ಲ. ಪೂರ್ವ ನಿಯೋಜಿತ ಲ್ಯಾಂಡಿಂಗ್ ಆಗಿದ್ದು, ಇದಕ್ಕೆ ಅಧಿಕಾರಿಗಳು ಕೂಡ ಅನುಮತಿ ನೀಡಿದ್ದಾರೆ. ಉತ್ತರ ಪ್ರದೇಶ ಸರ್ಕಾರ ಮತ್ತು ಯಮುನಾ ಎಕ್ಸ್ ಪ್ರೆಸ್ ಹೈವೇ ಅಥಾರಿಟಿ ಮತ್ತು ಟೋಲ್ ಪ್ರಾಧಿಕಾರದ ಅನುಮತಿಯ ಮೇರೆಗೆ ಭಾರತೀಯ ವಾಯುಸೇನೆ ಈ ಪರೀಕ್ಷಾರ್ಥ ಲ್ಯಾಂಡಿಂಗ್ ಮತ್ತು ಟೇಕ್ ಆಫ್ ಪರೀಕ್ಷೆ ನಡೆಸಿದೆ. ದೇಶದ ಇತಿಹಾಸದಲ್ಲಿಯೇ ಯುದ್ಧ ವಿಮಾನವೊಂದು ರಸ್ತೆಯಲ್ಲಿ ಲ್ಯಾಂಡಿಂಗ್ ಆಗಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ.

ವಿಷಯವೇನೆಂದರೆ, ಆಕಾಶದಲ್ಲಿ ಹಾರುವ ಯುದ್ಧ ವಿಮಾನಗಳನ್ನು ತುರ್ತು ಅಥವಾ ಅಪಾಯಕಾರಿ ಸಂದರ್ಭಗಳಲ್ಲಿ ಹೈವೇ ರಸ್ತೆಗಳಲ್ಲಿ ಇಳಿಸಬಹುದೇ ಎಂಬ ವಿಚಾರವಾಗಿ ಇಂದು ಪರೀಕ್ಷೆ ನಡೆಸಲಾಗಿದೆ. ಹೀಗಾಗಿ ಮೀರಜ್ 2000 ಲಘು ಯುದ್ಧವಿಮಾನವನ್ನು ಇಂದು ಬೆಳಗ್ಗೆ ಸುಮಾರು 6.40ರ ಸುಮಾರಿನಲ್ಲಿ ಯುಮುನಾ ಎಕ್ಸ್ ಪ್ರೆಸ್ ಹೈ ವೇನಲ್ಲಿ ಯಶಸ್ವಿಯಾಗಿ ಇಳಿಸಲಾಗಿದೆ. ಈ ಪರೀಕ್ಷಾತ್ಮಕ ಲ್ಯಾಂಡಿಂಗ್ ವೇಳೆ ಭಾರತೀಯ ವಾಯುಸೇನೆಗೆ ಸೇರಿದ ಹಿರಿಯ ಅಧಿಕಾರಿಗಳು ಮತ್ತು ದೆಹಲಿ ಕಾರ್ಪೊರೇಷನ್ ಕೆಲ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾರತೀಯ ವಾಯುಸೇನೆಗೆ ಸೇರಿದ ಕೆಲ ಅಧಿಕಾರಿಗಳು ಅಭಿಪ್ರಾಯಪಟ್ಟಂತೆ, "ರಾಷ್ಟ್ರೀಯ ಹೆದ್ದಾರಿಗಳಲ್ಲಿ ಲಘು ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮಾಡಿಸುವುದು ಇತರೆ ದೇಶಗಳಲ್ಲಿ ಸಾಮಾನ್ಯ. ಯುದ್ಧವೇರ್ಪಟ್ಟಾಗ ವಾಯು ನಿಲ್ದಾಣ ಅಥವಾ ಏರ್ ಪೋರ್ಟ್ ಗಳಲ್ಲಿ ರವಾನೆಗೆ ಸಹಕಾರಿಯಾಗಲೆಂದು ಶಸ್ತ್ರಾಗಾರಗಳನ್ನು ಸೃಷ್ಟಿಮಾಡಿಕೊಂಡಿರುತ್ತೇವೆ. ಆದರೆ ನಮ್ಮ ಶತ್ರುರಾಷ್ಟ್ರಗಳು ಇದನ್ನೇ ಪ್ರಮುಖವಾಗಿ ಗುರಿಯಾಗಿಸಿಕೊಳ್ಳುತ್ತಾರೆ. ಏರ್ ಪೋರ್ಟ್ ಮತ್ತು ವಾಯು ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು ಬಾಂಬ್ ಅಥವಾ ಕ್ಷಿಪಣಿ ದಾಳಿ ನಡೆಸುತ್ತಾರೆ. ಇದರಿಂದ ನಮ್ಮ ಏರ್ ಬೇಸ್ ಗಳು ನಾಶವಾಗಿ ಯುದ್ಧದಲ್ಲಿ ನಮಗೆ ಹಿನ್ನಡೆಯುಂಟಾಗುತ್ತದೆ".

"ಹೀಗಾಗಿ ಹೈವೇ ಗಳನ್ನು ಸಾಮಾನ್ಯವಾಗಿ ಯುದ್ಧ ವಿಮಾನಗಳ ಎರಡನೇ ರನ್ ವೇಗಳಾಗಿ ಬಳಕೆ ಮಾಡುವುದುಂಟು. ವಿದೇಶಗಳಲ್ಲಿ ಇದು ಸಾಮಾನ್ಯವಾದರೂ, ಭಾರತದಲ್ಲಿ ಇದು ವಿರಳ. ನಮ್ಮ ದೇಶದಲ್ಲಿ ಯುದ್ದ ವಿಮಾನಗಳನ್ನು ಇಳಿಸುವ ಸಾಮರ್ಥ್ಯವಿರುವ ರನ್ ವೇ ಗಳ ಸಂಖ್ಯೆ ಕೇವಲ ಬೆರಳೆಣಿಕೆಯಷ್ಟಿದ್ದು, ಇಲ್ಲಿ ಲ್ಯಾಂಡಿಂಗ್ ಮಾಡಬಹುದಾಗಿದೆ. ಉಳಿದ ರಸ್ತೆಗಳಲ್ಲಿ ಪಾದಾಚಾರಿಗಳು, ಪ್ರಾಣಿಗಳು ಮತ್ತು ಸಂಚಾರಿ ದಟ್ಟಣೆ ಇರುವುದರಿಂದ ಅಲ್ಲಿ ಲ್ಯಾಂಡಿಂಗ್ ಅಸಾಧ್ಯ" ಎಂದು ಹೇಳಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com