ಪಿಯುಸಿ ಫಲಿತಾಂಶ: ಮುಂದುವರಿದ ಗೊಂದಲ

ದ್ವಿತೀಯ ಪಿಯು ಫಲಿತಾಂಶದ ಗೊಂದಲ ಎರಡನೇ ದಿನವೂ ಮುಂದುವರೆದಿದ್ದು, ಮೊದಲ ದಿನವೇ ಮರು ಎಣಿಕೆ, ಛಾಯಾ ಪ್ರತಿ ಹಾಗೂ ಮರುಮೌಲ್ಯಮಾಪನಕ್ಕೆ ಆರೂವರೆ ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿವೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ದ್ವಿತೀಯ ಪಿಯು ಫಲಿತಾಂಶದ ಗೊಂದಲ ಎರಡನೇ ದಿನವೂ ಮುಂದುವರೆದಿದ್ದು, ಮೊದಲ ದಿನವೇ ಮರು ಎಣಿಕೆ, ಛಾಯಾ ಪ್ರತಿ  ಹಾಗೂ ಮರುಮೌಲ್ಯಮಾಪನಕ್ಕೆ ಆರೂವರೆ ಸಾವಿರಕ್ಕೂ ಅಧಿಕ ಅರ್ಜಿಗಳು ಸ್ವೀಕೃತವಾಗಿವೆ.

ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುವಂತೆ ಮರು ಎಣಿಕೆ, ಛಾಯಾ ಪ್ರತಿ ಹಾಗೂ ಮರು ಮೌಲ್ಯಮಾಪನಕ್ಕೆ ಮೊದಲ ದಿನ 4  ಸಾವಿರದ ಆಸುಪಾಸು ಅರ್ಜಿಗಳು ಬರುತ್ತವೆ. ಆದರೆ, ಈ ಬಾರಿ ಬೆಂಗಳೂರು ಒನ್ ಹಾಗೂ ಕರ್ನಾಟಕ ಒನ್ ಮೂಲಕ ಮಾತ್ರವೇ ಆರೂವರೆ  ಸಾವಿರಕ್ಕೂ ಅಧಿಕ ಅರ್ಜಿಗಳು ಬಂದಿರುವುದು ಫಲಿತಾಂಶದಲ್ಲಿನ ಗೊಂದಲವನ್ನು ಸಾರುತ್ತದೆ. ಎರಡು ವೆಬ್‍ಸೈಟ್‍ಗಳಲ್ಲಿ ಪ್ರಕಟಗೊಂಡ  ಫಲಿತಾಂಶದ ಬಳಿಕ ವಿದ್ಯಾರ್ಥಿಗಳು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಈಗಾಗಲೇ ಆ ಎರಡು ವೆಬ್‍ಸೈಟ್ ಗಳನ್ನು ಇಲಾಖೆ ನಿಷೇಧಿಸಿದ್ದು, ಇನ್ನು  ಮುಂದೆ ಯಾವುದೇ ಫಲಿತಾಂಶ ನೀಡದಿರಲು ನಿರ್ಧರಿಸಿದೆ.

ಏತನ್ಮಧ್ಯೆ, ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಕಚೇರಿ ಎದುರು ಪ್ರತಿಭಟಿಸಿದರು. ಫಲಿತಾಂಶದಲ್ಲಿ ಆಗಿರುವ  ಗೊಂದಲದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರಿನಿಂದ ಬಂದಿದ್ದ ಮಹೇಶ್ ಗೌಡ ಎಂಬ ವಿದ್ಯಾರ್ಥಿಯು ಫಲಿತಾಂಶದ ಬಗ್ಗೆ ಅಸಮಾಧ ವ್ಯಕ್ತಪಡಿಸಿದ್ದು, ಎಲ್ಲ ವಿಷಯಗಳಲ್ಲಿ 75 ಕ್ಕೂ ಅಧಿಕ  ಬಂದಿದೆ. ಆದರೆ, ಇಂಗ್ಲಿಷ್ ಒಂದರಲ್ಲಿ ಗೈರು ಎಂದಾಗಿದೆ. ಇಲಾಖೆ ಹೇಳುವಂತೆ ಮರು ಎಣಿಕೆ, ಛಾಯಾ ಪ್ರತಿ ಅಥವಾ ಮರು ಮೌಲ್ಯ ಮಾಪನಕ್ಕೆ  ಹಾಕಿದರೆ ಸಾವಿರಗಟ್ಟಲೇ ಹಣ ಖರ್ಚಾಗುತ್ತದೆ. ಅವರು ಮಾಡಿದ ತಪ್ಪಿಗೆ ನಾವೇಕೆ ಹಣ ವ್ಯಯಿಸಬೇಕು? ಎಂದು ಪ್ರಶ್ನಿಸಿದ್ದಾರೆ.

ಹಾಸನದಿಂದ ಬಿ.ವೆಂಕಟೇಶ್ ಎಂಬ ಪಾಲಕ ತನ್ನ ಮಗನಿಗಾದ ಅನ್ಯಾಯದ ಬಗ್ಗೆ ವಿವರಿಸಲು ಇಲಾಖೆ ಅಧಿಕಾರಿಗಳನ್ನು ಭೇಟಿಯಾಗಲು  ಬಂದಿದ್ದಾರೆ, `ಎಲ್ಲ ವಿಷಯಗಳಲ್ಲಿ 80ಕ್ಕೂ ಅಧಿಕ ಅಂಕ ಪಡೆದಿದ್ದಾನೆ. ಆದರೆ, ಭೌತಶಾಸ್ತ್ರದಲ್ಲಿ ಕೇವಲ 14 ಬಂದಿದೆ. ಇದು ಖಡಿತ ಸಾಧ್ಯವಿಲ್ಲ.  ಇಲಾಖೆ ಮಾಡಿರುವ ಪ್ರಮಾದವಾಗಿದೆ. ಆದರೆ, ನಾನು ಮರುಮೌಲ್ಯಮಾಪನಕ್ಕೆ ಅರ್ಜಿ ಹಾಕಲು ರು.1256 ಶುಲ್ಕ ಭರಿಸಬೇಕಿದೆ. ನಾನೇಕೆ ಹಣ  ತುಂಬಲಿ? ಉಚಿತವಾಗಿ ಸರಿಪಡಿಸಿಕೊಳ್ಳಬೇಕು' ಎಂದು ಆಕ್ರೋಶವ್ಯಕ್ತಪಡಿಸಿದರು.

ನಿರ್ದೇಶಕರು ಬರಲೇ ಇಲ್ಲ!


ಇಲಾಖೆಯಲ್ಲಾದ ಅವ್ಯವಸ್ಥೆ ಬಗ್ಗೆ ದೂರು ನೀಡಲು ಹಾಗೂ ತಮ್ಮ ಅಹವಾಲುಗಳನ್ನು ತಿಳಿಸುವ ಸಲುವಾಗಿ ವಿದ್ಯಾರ್ಥಿ ಸಂಘಟನೆಗಳು ಹಾಗೂ ಕೆಲ  ಪಾಲಕ, ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಇಲಾಖೆ ಎದುರು ಬೆಳಗ್ಗೆಯಿಂದ ಕಾದು ನಿಂತಿದ್ದರು. ಜತೆಗೆ ಮಾಧ್ಯಮ ಪ್ರತಿನಿಧಿಗಳು ಇದ್ದರು. ಆದರೆ  ಈ ವಿಚಾರ ತಿಳಿದ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಸುಷ್ಮಾ ಗೋಡಬೋಲೆ ಕಚೇರಿಗೆ ಆಗಮಿಸಲೇ ಇಲ್ಲ. ಸಂಜೆ 5 ಗಂಟೆ ವೇಳೆಗೆ ತಮ್ಮ  ಕಾರನ್ನು ಕಳುಹಿಸಿ ತುರ್ತು ಕಡತಗಳನ್ನು ಮನೆಗೆ ತರಿಸಿಕೊಂಡು ಸಹಿ ಮಾಡಿ ಕಳುಹಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com