
ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ ಸಾಮಾನ್ಯವಾಗಿ ಮಕ್ಕಳನ್ನು ನೋಡಿಕೊಳ್ಳುವ ಕೆಲಸ ತಾಯಿಯದ್ದು. ತಂದೆಯಾದವನು ದುಡಿದು ತಂದು ಮನೆಯ ಆರ್ಥಿಕ ವ್ಯವಹಾರಗಳನ್ನು ನೋಡಿಕೊಳ್ಳಬೇಕು. ಇನ್ನು ವಿಚ್ಛೇದನಗೊಂಡ ದಂಪತಿಗಳಲ್ಲಿ ಮಕ್ಕಳನ್ನು ನೋಡಿಕೊಳ್ಳಲು ಪತಿಯು ಪತ್ನಿಗೆ ಪರಿಹಾರ ನೀಡಬೇಕಾಗುತ್ತದೆ. ಕೆಲವೊಂದು ಉದಾಹರಣೆಗಳನ್ನು ಬಿಟ್ಟರೆ ತಾಯಿಯೇ ಮಗುವನ್ನು ನೋಡಿಕೊಳ್ಳುತ್ತಾಳೆ.
ಆದರೆ ಇದೀಗ ಕಾನೂನು ಆಯೋಗವು ಚಿಕ್ಕ ಮಕ್ಕಳ ಪೋಷಣೆ-ಪಾಲನೆಯ ಉಸ್ತುವಾರಿಯನ್ನು ಇಬ್ಬರೂ ನೋಡಿಕೊಳ್ಳಬೇಕೆಂದು ಸೂಚನೆ ನೀಡಿದೆ. ದಂಪತಿ ಬೇರೆ ಬೇರೆಯಾದರೆ ಮಕ್ಕಳನ್ನು ಮಾತ್ರ ಮರೆಯುವ ಹಾಗಿಲ್ಲ; ಅಥವಾ ತಾಯಿಯೊಬ್ಬಳೇ ನೋಡಿಕೊಳ್ಳುವ ಹಾಗೂ ಇಲ್ಲ, ತಂದೆ-ತಾಯಿಗಳಿಬ್ಬರ ಆರೈಕೆ, ಪ್ರೀತಿಯಲ್ಲಿ ಚಿಕ್ಕ ಮಕ್ಕಳು ಬೆಳೆಯಬೇಕೆಂದು ಆಯೋಗ ಹೇಳಿದೆ. ಹಿಂದೂ ಅಲ್ಪಸಂಖ್ಯಾತ ಮತ್ತು ರಕ್ಷಕ ಕಾಯಿದೆ 1956 ಮತ್ತು ಪೋಷಕ ಮತ್ತು ರಕ್ಷಕ ಕಾಯಿದೆ, 1890ಗೆ ತಿದ್ದುಪಡಿ ತರಬೇಕೆಂದು ಕಾನೂನು ಸಚಿವಾಲಯಕ್ಕೆ ಅದು ಪತ್ರ ಬರೆದಿದೆ.
ಇದರಿಂದ ಹೆಣ್ಣು ಮತ್ತು ಗಂಡು ನಡುವಿನ ತಾರತಮ್ಯವನ್ನು ಸರಿಪಡಿಸಬಹುದು. ಸಂವಿಧಾನದ 14ನೇ ಪರಿಚ್ಛೇದ ಸಾರುವ ಸಮಾನತೆಯ ತತ್ವಗಳನ್ನು ಪೂರೈಸಲು ಈ ಕಾನೂನು ತಿದ್ದುಪಡಿ ನೆರವಾಗುತ್ತದೆ ಎಂದು ಆಯೋಗ ಹೇಳುತ್ತದೆ. ಪೋಷಕ ಮತ್ತು ರಕ್ಷಕ ಕಾಯಿದೆಯು, ವಿಚ್ಛೇದಿತ ದಂಪತಿ ಮಕ್ಕಳನ್ನು ಭೇಟಿ ಮಾಡುವ ವ್ಯವಸ್ಥೆ ಬಗ್ಗೆಯೂ ತಿಳಿಸಿದೆ.
ಆಧುನಿಕ ಸಮಾಜದ ಬದಲಾವಣೆಯ ಕಾಲಘಟ್ಟದಲ್ಲಿ ಚಿಕ್ಕ ಮಕ್ಕಳ ಪೋಷಣೆಯಲ್ಲಿ ಹಂಚಿಕೆಯ ಪಾಲನೆ ಕಲ್ಪನೆ ನಮ್ಮ ದೇಶಕ್ಕೆ ಹೊಸದಾಗಿರುವ ಸಂದರ್ಭದಲ್ಲಿ ಕಾನೂನು ಆಯೋಗದ ಈ ಶಿಫಾರಸು ಮಹತ್ವ ಪಡೆದುಕೊಂಡಿದೆ.
Advertisement