
ನವದೆಹಲಿ: ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅಂತರ್ ಸರ್ಕಾರಿ ಸಮಿತಿ(ಐಪಿಸಿಸಿ)ಯ ಮಾಜಿ ಅಧ್ಯಕ್ಷ ರಾಜೇಂದ್ರ ಕೆ. ಪಚೌರಿ ಅವರು ಕಿರಿಯ ಸಹೋದ್ಯೋಗಿಗೆ ಲೈಂಗಿಕ ದೌರ್ಜನ್ಯ ನಡೆಸಿದ್ದು ನಿಜ ಎಂದು ತನಿಖೆಯಿಂದ ತಿಳಿದುಬಂದಿದೆ.
ಪಚೌರಿ ವಿರುದ್ಧ ದೂರು ದಾಖಲಿಸಿದ್ದ ಸಂಶೋಧನಾ ವಿಶ್ಲೇಷಕಿ ನಿರ್ದೋಷಿಯಾಗಿದ್ದು, ಆಕೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವುದು ಸ್ಪಷ್ಟವಾಗಿದೆ ಎಂದು ಎನರ್ಜಿ ಆ್ಯಂಡ್ ರಿಸೋರ್ಸ್ ಇನ್ ಸ್ಟಿಟ್ಯೂಟ್ ನಡೆಸಿದ ಆಂತರಿಕ ತನಿಖೆಯಿಂದ ಬಹಿರಂಗವಾಗಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಜತೆಗೆ, ಪಚೌರಿ ವರ್ತನೆ ಅವರು ಅಧಿಕಾರ ದುರ್ಬಳಕೆ ಮಾಡಿದ್ದಾರೆ, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿ ಸಂಸ್ಥೆಯ ನಿಯಮ ಉಲ್ಲಂಘಿಸಿದ್ದಾರೆ ಎಂಬುದನ್ನು ಸಾಬೀತು ಮಾಡಿದೆ ಎಂದು ಆಂತರಿಕ ದೂರು ಸಮಿತಿ(ಐಸಿಸಿ)ಯ ಮೂಲಗಳು ತಿಳಿಸಿವೆ.
ಆರೋಪ ಸಾಬೀತಾದದ್ದೇ ಆದಲ್ಲಿ, ವಿಶಾಖಾ ಮಾರ್ಗಸೂಚಿಯನ್ವಯ ದಾಖಲಾದ ದೂರಿನಲ್ಲಿ ಶಿಕ್ಷೆಗೊಳಗಾದ ಮೊದಲ ವ್ಯಕ್ತಿ ಎಂಬ ಕುಖ್ಯಾತಿಗೆ ಅವರು ಪಾತ್ರರಾಗಲಿದ್ದಾರೆ. ತೆಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‍ಪಾಲ್ ವಿರುದ್ಧವೂ ಇದೇ ಮಾರ್ಗ ಸೂಚಿಯನ್ವಯ ದೂರು ದಾಖಲಾಗಿದೆ.
Advertisement