
ಹೈದರಾಬಾದ್: ಆ ಪ್ರೇಮಿಗಳಿಗೆ ಒಂದಾಗುವ ಅವಕಾಶ ಭಾರತದಲ್ಲೆಲ್ಲೂ ಸಿಗಲೇ ಇಲ್ಲ. ಅವರಿಬ್ಬರನ್ನು ಕುಟುಂಬದವರೂ ತಮ್ಮಿಂದ ದೂರವಿಟ್ಟರು.
ಸಮಾಜವೂ ಬೆಂಬಲ ನೀಡಲಿಲ್ಲ. ವರುಷಗಳಿಂದ ಬಲ್ಲ ಗೆಳೆಯ ಗೆಳತಿಯರೂ ಅವರನ್ನು ಅಸಹ್ಯವೆಂಬಂತೆ ನೋಡಿದರು. ರಿಜಿಸ್ಟರ್ಡ್ ಮದುವೆ ಆಗೋಣ ಅಂದ್ರೆ ಕಾನೂನು ಕೂಡ ಅವರ ಪರವಾಗಿರಲಿಲ್ಲ. ಕೊನೆಗೂ ಅವರು ಮದುವೆಯಾಗಲಿಕ್ಕಾಗಿ ದೇಶ ತೊರೆದೇ ಹೋಗಬೇಕಾಯ್ತು.
ಹತ್ತು ವರ್ಷಗಳ ಅವರ ಪ್ರೀತಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ಹಸಿರು ನಿಶಾನೆ ಸಿಕ್ಕು ವಿವಾಹ ಭಾಗ್ಯ ದೊರೆಯಿತು. ಅಂದಹಾಗೆ ಆ ಪ್ರೇಮಿಗಳ ಹೆಸರು ಶ್ವೇತಾ ಪೈ ಮತ್ತು ಸ್ಮೃತಿ ನಾರಾಯಣ್! ಹೌದು, ಅದು ಸಲಿಂಗಿ ಸ್ತ್ರೀಯರ ವಿವಾಹ. ಹೈದರಾಬಾದ್ ಮೂಲದ ಗೂಗಲ್ ಉದ್ಯೋಗಿಗಳಾದ ಶ್ವೇತಾ ಮತ್ತು ಸ್ಮೃತಿ ಸಲಿಂಗ ಹಕ್ಕುಗಳಿಗಾಗಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.
ಹಲವು ಎಲ್ ಜಿಬಿಟಿ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದರು. ಆದರೆ ಖುದ್ದು ಅವರಿಬ್ಬರ ಪ್ರೀತಿಗೇ ಎಲ್ಲೂ ಮಾನ್ಯತೆ ಸಿಗದೇ ಹೋದಾಗ, ಅವರ ವಿರುದ್ಧ ಬೆದರಿಕೆಗಳೆಲ್ಲ ಬಂದಾಗ ತಮ್ಮ ಗುಂಪಿನವರದೇ ಬೆಂಬಲದಿಂದ ಪ್ರೀತಿ ಕಾಯ್ದುಕೊಂಡು, ಇದೀಗ ಸ್ಯಾನ್ ಫ್ರಾನ್ಸಿಸ್ಕೋದ ಸಿಟಿ ಹಾಲ್ ನಲ್ಲಿ ಸರಳ ವಿವಾಹ ಮಾಡಿಕೊಂಡಿದ್ದಾರೆ.
Advertisement