

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಮುಂದುವರೆದಿದ್ದು, ಉಗ್ರರ ದಾಳಿಗೆ ಓರ್ವ ನಾಗರಿಕ ಸಾವನ್ನಪ್ಪಿರುವ ಘಟನೆ ಬುಧವಾರ ಕಾಶ್ಮೀರದ ಸೋಪುರ್ ಜಿಲ್ಲೆಯಲ್ಲಿ ನಡೆದಿದೆ.
ಕಣಿವೆ ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ಸಂಸ್ಥೆಯು ಟವರ್ ನಿರ್ಮಿಸುವ ಕಾರ್ಯದಲ್ಲಿ ತೊಡಗಿದ್ದು, ಇದನ್ನು ಸ್ಥಳೀಯ ಪ್ರತ್ಯೇಕತಾ ವಾದಿಗಳು ಮತ್ತು ಉಗ್ರರು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದರು. ಇಂದು ಉಗ್ರನ ಗುಂಡಿಗೆ ಓರ್ವ ಬಲಿಯಾಗಿದ್ದು, ಕೇವಲ 24 ಗಂಟೆಗಳ ಅವಧಿಯಲ್ಲಿ ಉಗ್ರರು ಎರಡನೇ ಬಲಿ ಪಡೆದಿದ್ದಾರೆ. ಮೃತ ವ್ಯಕ್ತಿಯ ಹೆಸರು ತಿಳಿಯದೇ ಇದ್ದರೂ ಆತ ಬಿಎಸ್ ಎನ್ ಎಲ್ ಸಂಸ್ಥೆಯ ನೌಕರ ಎಂದು ತಿಳಿದುಬಂದಿದೆ.
ಸೋಪುರ್ ಜಿಲ್ಲೆಯಲ್ಲಿ ಟವರ್ ನಿರ್ಮಾಣ ಮಾಡುವಾಗ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ನೌಕರರಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಕಳೆದ ಸೋಮವಾರವೂ ಕೂಡ ಇದೇ ಸೋಪುರ್ ಜಿಲ್ಲೆಯಲ್ಲಿ ಉಗ್ರರು ದುಷ್ಕೃತ್ಯ ನಡೆಸಿದ್ದರು. ಗ್ರಾಮದಲ್ಲಿ ಟವರ್ ನಿರ್ಮಿಸುತ್ತಿರುವ ಸಿಬ್ಬಂದಿಗಳನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸಿದ್ದರು.
ಇನ್ನು ಘಟನೆಯಿಂದ ಬಿಎಸ್ ಎನ್ ಎಲ್ ನೌಕರರು ಆಘಾತಕ್ಕೊಳಗಾಗಿದ್ದು, ಸಿಬ್ಬಂದಿಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಲಾಗುವುದು ಎಂದು ಸ್ಥಳೀಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.