
ಚೆನ್ನೈ: ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿಲ್ಲ ಬದಲಿಗೆ ತಾತ್ಕಾಲಿಕವಾಗಿ ಅದರ ಮಾನ್ಯತೆಯನ್ನು ರದ್ದು ಮಾಡಲಾಗಿದೆ ಎಂದು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮದ್ರಾಸ್ ಸಂಸ್ಥೆಯ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಅಂಬೇಡ್ಕರ್ ಪೆರಿಯಾರ್ ದಲಿತ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿದ ಸುದ್ದಿ ಹರಡಿ, ವಿದ್ಯಾರ್ಥಿ ಸಂಘಟನೆಗಳು ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಂತೆಯೇ ಐಐಡಿ ಮದ್ರಾಸ್ ಸಂಸ್ಥೆ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಐಐಟಿ ಮದ್ರಾಸ್, "ಸಂಸ್ಥೆಯ ನಿಬಂಧನೆಗಳನ್ನು ಸಂಘಟನೆ ಉಲ್ಲಂಘಿಸಿರುವ ಕಾರಣ, ಸಂಘಟನೆಯ ಮಾನ್ಯತೆಯನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಘಟನೆಯಿಂದ ವರದಿ ಕೇಳಲಾಗುವುದು. ವರದಿ ಬಂದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ" ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಅಂಬೇಡ್ಕರ್ ಪೆರಿಯಾರ್ ದಲಿತ ವಿದ್ಯಾರ್ಥಿ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ತೀಕ್ಷ್ಣವಾಗಿ ಟೀಕಿಸಿದ್ದ ಪರಿಣಾಮ ಕೇಂದ್ರ ಸರ್ಕಾರ ಐಐಟಿ ಮದ್ರಾಸ್ ಗೆ ಪತ್ರ ರವಾನೆ ಮಾಡಿತ್ತು. ಕೇಂದ್ರ ಸರ್ಕಾರದ ಪತ್ರ ಬಂದ ಬಳಿಕ ಐಐಟಿ ಮದ್ರಾಸ್ ಸಂಸ್ಥೆ ಅಂಬೇಡ್ಕರ್ ಪೆರಿಯಾರ್ ವಿದ್ಯಾರ್ಥಿ ಸಂಘಟನೆಯ ಮಾನ್ಯತೆ ರದ್ದುಗೊಳಿಸಿತ್ತು. ಐಐಟಿ ಮದ್ರಾಸ್ ನ ಈ ನಡವಳಿಕೆ ವಿದ್ಯಾರ್ಥಿ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟ್ಟರ್ ಗಳಲ್ಲಿ ಐಐಟಿ ಮದ್ರಾಸ್ ನಡೆಯನ್ನು ವ್ಯಾಪಕವಾಗಿ ಟೀಕಿಸಲಾಗಿತ್ತು. ಅಲ್ಲದೆ ಸರ್ಕಾರದ ನಡೆ ವಿರುದ್ಧ ಕಾಂಗ್ರೆಸ್ ಮತ್ತು ಎಎಪಿ ನಾಯಕರು ಟೀಕಿಸಿದ್ದರು.
ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧವೂ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪಕ್ಷಗಳ ಕಾರ್ಯಕರ್ತರ ನೇತೃತ್ವದಲ್ಲಿ ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.
Advertisement