ವಿದ್ಯಾರ್ಥಿ ಸಂಘಟನೆ ನಿಷೇಧ ಪ್ರಕರಣ: ಐಐಟಿ ಮದ್ರಾಸ್ ಗೆ ಎನ್ ಸಿಎಸ್ ಸಿ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು ಎಂಬ ಕಾರಣಕ್ಕಾಗಿ ದಲಿತ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿದ ಮದ್ರಾಸ್ ಐಐಟಿ ವಿರುದ್ಧ ವಿವರ ಕೇಳಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ಭಾನುವಾರ...
ಐಐಟಿ ಮದ್ರಾಸ್ ಶಿಕ್ಷಣ ಸಂಸ್ಥೆ
ಐಐಟಿ ಮದ್ರಾಸ್ ಶಿಕ್ಷಣ ಸಂಸ್ಥೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದರು ಎಂಬ ಕಾರಣಕ್ಕಾಗಿ ದಲಿತ ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸಿದ ಮದ್ರಾಸ್ ಐಐಟಿ ವಿರುದ್ಧ ವಿವರ ಕೇಳಿ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ (ಎನ್ ಸಿಎಸ್ ಸಿ) ಭಾನುವಾರ ನೋಟಿಸ್ ಜಾರಿ ಮಾಡಿದೆ.

ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಪಿಎಲ್ ಪುನಿಯಾ ಅವರು ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ, ವಿದ್ಯಾರ್ಥಿ ಸಂಘಟನೆಯನ್ನಿ ನಿಷೇಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಐಟಿ ಮದ್ರಾಸ್ ಶಿಕ್ಷಣ ಸಂಸ್ಥೆಯಿಂದ ವರದಿ ಕೇಳಿದ್ದೇವೆ ಎಂದು ಹೇಳಿದ್ದಾರೆ. "ಪ್ರಜಾ ಪ್ರಭುತ್ವದಲ್ಲಿ ಎಲ್ಲರಿಗೂ ಎಲ್ಲವನ್ನೂ ಪ್ರಶ್ನಿಸುವ ಹಕ್ಕಿದೆ. ಪ್ರಮುಖವಾಗಿ ಯುವಕರು ಅಥವಾ ವಿದ್ಯಾರ್ಥಿಗಳಿಗೆ ಕಾಲೇಜು ಕ್ಯಾಂಪಸ್ ನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವಿರಬೇಕು. ಸಂಘಟನೆಯನ್ನು ನಿಷೇಧಿಸುವ ನಿರ್ಧಾರ ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲಿ ಐಐಟಿ ಮದ್ರಾಸ್ ಸಂಸ್ಥೆಗೆ ಆಯೋಗದ ವತಿಯಿಂದ ನೋಟಿಸ್ ಜಾರಿ ಮಾಡಿದ್ದೇವೆ ಎಂದು ಪುನಿಯಾ ಹೇಳಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಎನ್ ಡಿಎ ಸರ್ಕಾರದ ವಿರುದ್ಧ ಪರೋಕ್ಷ ಟೀಕೆ ಮಾಡಿದ ಪುನಿಯಾ ಅವರು, ಮೋದಿ ಸರ್ಕಾರ ರಚನೆಯಾದ ದಿನದಿಂದ ಸಾಕಷ್ಟು ದಲಿತ ವಿರೋಧಿ ಘಟನೆಗಳ ಸಂಖ್ಯೆ ಹೆಚ್ಚಾಗುತ್ತಿವೆ. ಪ್ರಸ್ತುತ ಘಟನೆಯೇನೂ ಸಣ್ಣ ಘಟನೆಯಲ್ಲ. ವಿದ್ಯಾರ್ಥಿ ಸಂಘಟನೆಯನ್ನು ನಿಷೇಧಿಸುವುದು ದೊಡ್ಡ ನಿರ್ಧಾರವಾಗಿದೆ ಎಂದು ಪುನಿಯಾ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಟೀಕಿಸಿದ್ದ ಮದ್ರಾಸ್ ಐಐಟಿಯ ಅಂಬೇಡ್ಕರ್ ಪೆರಿಯಾರ್ ಸ್ಟೂಡೆಂಟ್ಸ್ ಸರ್ಕಲ್ ಸಂಘಟನೆಯ ಮಾನ್ಯತೆಯನ್ನು ಮದ್ರಾಸ್ ಐಐಟಿ ರದ್ದುಪಡಿಸಿತ್ತು. ವಿದ್ಯಾರ್ಥಿ ಸಂಘಟನೆಯ ಮಾನ್ಯತೆ ರದ್ದುಪಡಿಸುವಂತೆ ಕೇಂದ್ರ ಮಾನವಸಂಪನ್ಮೂಲ ಇಲಾಖೆ ಶಿಫಾರಸ್ಸು ಮಾಡಿದ್ದರಿಂದಲೇ ಮದ್ರಾಸ್ ಐಐಟಿ ತಮ್ಮ ಸಂಘಟನೆಯ ಮಾನ್ಯತೆ ರದ್ದುಗೊಳಿಸಿದೆ ಎಂದು ಎ ಪಿ ಎಸ್ ಸಿ ಸದಸ್ಯರು ಆರೋಪಿಸಿದ್ದರು. ಅಲ್ಲದೆ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಅವರ ವಿರುದ್ಧುವೂ ದೆಹಲಿಯಲ್ಲಿ ತೀವ್ರ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್ ಮತ್ತು ಎಎಪಿ ಕಾರ್ಯಕರ್ತರು ಸಾಥ್ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com