

ರಾಂಚಿ: ವಿದ್ಯುತ್ ಇಲಾಖೆಯ ಯಡವಟ್ಟಿನಿಂದಾಗಿ ಮನೆ ಮಾಲಕಿಯೊಬ್ಬಳು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಘಟನೆ ಜಾರ್ಖಂಡ್‌ನ ರಾಂಚಿಯಲ್ಲಿ ನಡೆದಿದೆ.
ಇಷ್ಟಕ್ಕೂ ವಿದ್ಯುತ್ ಇಲಾಖೆಗೂ-ಮನೆ ಮಾಲಕಿಗೆ ಹೃದಯಾಘಾತವಾಗಲು ಕಾರಣವೇನು ಗೊತ್ತೇ..? ವಿದ್ಯುತ್ ಬಿಲ್. ಈ ತಿಂಗಳ ವಿದ್ಯುತ್ ಬಿಲ್ ನೋಡಿ ಮನೆ ಮಾಲಕಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸಾಮಾನ್ಯವಾಗಿ ಪ್ರತೀ ತಿಂಗಳು 100-150 ರು. ಬರುತ್ತಿದ್ದ ಬಿಲ್ ಈ ಬಾರಿ ಬರೋಬ್ಬರಿ 55 ಕೋಟಿ ರು. ಆಗಿರುವುದನ್ನು ಕಂಡ ಮಾಲಕಿ ಕೂಡಲೇ ಕೆಳಕ್ಕೆ ಕುಸಿದಿದ್ದಾರೆ.
ಮೂಲತಃ ಜಾರ್ಖಂಡ್ ರಾಂಚಿಯವರಾದ ಮನೆ ಮಾಲೀಕ ಕೃಷ್ಣ ಪ್ರಸಾದ್ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಈ ವೇಳೆ ಬಾಗಿಲಲ್ಲಿ ಬಿದ್ದಿದ್ದ ಆ ಕರೆಂಟ್ ಬಿಲ್ಲನ್ನು ಕೃಷ್ಣ ಪ್ರಸಾದ್ ಅವರ ತಾಯಿ ತೆಗೆದುಕೊಂಡಿದ್ದಾರೆ. ಬಿಲ್ ಮೇಲೆ ಕಣ್ಣಾಡಿಸಿದ್ದೇ ತಡ ಅವರಿಗೆ ಹೃದಯಾಘಾತವಾಗಿ ಕೆಳಕ್ಕೆ ಕುಸಿದು ಬಿದ್ದರು. ತ್ತು. ಕೂಡಲೇ ಅಕ್ಕಪಕ್ಕದವರು ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸುದ್ದಿ ತಿಳಿದ ಕೃಷ್ಣಪ್ರಸಾದ್ ಆಸ್ಪತ್ರೆಗೆ ನೇರವಾಗಿ ಧಾವಿಸಿ ವಿಚಾರಿಸಿದ್ದಾರೆ. ನೆರೆ ಮನೆಯವರು ನಡೆದ ಘಟನೆಯನ್ನೆಲ್ಲಾ ವಿವರಿಸಿದ್ದಾರೆ. ಬಳಿಕ ಬಿಲ್ ಅನ್ನು ನೋಡಿದ ಕೃಷ್ಣಪ್ರಸಾದ್ ಅವರಿಗೂ ಆಘಾತವಾಗಿದೆ.
ಇದೀಗ ವಿದ್ಯುತ್ ಇಲಾಖೆ ವಿರುದ್ಧ ಕೃಷ್ಣ ಪ್ರಸಾದ್ ಕೋರ್ಟ್ ನಲ್ಲಿ ದೂರು ಸಲ್ಲಿಸಿದ್ದಾರೆ. ಇಲಾಖೆಯ ಬೇಜವಾಬ್ದಾರಿಯಿಂದಾಗಿ ಇದೀಗ ನನ್ನ ತಾಯಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾರೆ. ಒಂದು ವೇಳೆ ನನ್ನ ತಾಯಿಗೆ ಆಗಬಾರದ್ದೇನಾದರೂ ಆಗಿದ್ದರೆ ಯಾರು ಹೊಣೆ ಎಂದು ತಮ್ಮ ದೂರಿನಲ್ಲಿ ಕೃಷ್ಣಪ್ರಸಾದ್ ಆಕ್ಷೇಪಿಸಿದ್ದಾರೆ. ಇದೀಗ ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾದ್ದರಿಂದ ಎಚ್ಚೆತ್ತುಕೊಂಡಿರುವ ವಿದ್ಯುತ್ ಇಲಾಖೆ ಇದು ಪ್ರಿಟಿಂಗ್ ಮಿಸ್ಟೇಕ್ ಎಂದು ಜಾರಿ ಕೊಳ್ಳಲು ಯತ್ನಿಸುತ್ತಿದೆ. ಅಲ್ಲದೆ ಘಟನೆ ಕುರಿತಂತೆ ತನಿಖೆ ನಡೆಸುವುದಾಗಿ ಹೇಳಿದೆ.