

ಅಹ್ಮದಾಬಾದ್: “ಮುಸ್ಲಿಂ ಬಹುಪತ್ನಿತ್ವ ಪದ್ಧತಿ ಒಂದು ಹೀನ ಪಿತೃಪ್ರಧಾನ ವ್ಯವಸ್ಥೆ. ಅದನ್ನು ಕೊನೆಗೊಳಿಸಬೇಕು. ಈ ಬಗ್ಗೆ ಕೆಲವು ಮುಸ್ಲಿಮರು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾರೆ" ಎಂದು ಗುಜರಾತ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
“ಹಾಲಿ ದಿನಗಳಲ್ಲೂ ಈ ವ್ಯವಸ್ಥೆ ಮುಂದುವರಿದಿರುವುದು ವೈಯಕ್ತಿಕ ಸ್ವಾರ್ಥದಿಂದಾಗಿಯಷ್ಟೇ. ಇದಕ್ಕೆ ಮುಸ್ಲಿಂ ವೈಯಕ್ತಿಕ ಕಾನೂನಿಗೆ ತಿದ್ದುಪಡಿ ಆಗಬೇಕು. ಆಧುನಿಕ ಪ್ರಗತಿಪರ ಚಿಂತನೆಗಳ ಪರಿಣಾಮ ಈ ಪದ್ಧತಿ ಇಲ್ಲವಾಗಬೇಕು" ಎಂದು ನ್ಯಾ. ಜೆ.ಬಿ.ಪರ್ದಿವಾಲ ಹೇಳಿದ್ದಾರೆ. ಮೊದಲ ಪತ್ನಿಯ ಅನುಮತಿಯಿಲ್ಲದೆ ಎರಡನೇ ಮದುವೆಯಾಗಿದ್ದ ಆರೋಪ ಎದುರಿಸುತ್ತಿದ್ದ ಮುಸ್ಲಿಂ ವ್ಯಕ್ತಿಯ ಕುರಿತ ಪ್ರಕರಣದಲ್ಲಿ ಅವರು ಈ ಮಾತು ಹೇಳಿದ್ದಾರೆ. ವ್ಯಕ್ತಿಯ ಮೇಲೆ ಬಹುಪತ್ನಿತ್ವ ಆರೋಪ ಹೊರಿಸಲಾಗಿದೆ.
ಆದರೆ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಈ ಆರೋಪ ಸಿಂಧುವೆನಿಸಿಲ್ಲ. ನ್ಯಾಯಮೂರ್ತಿಗಳು ವ್ಯಕ್ತಿಯ ಮೇಲಿದ್ದ ಆರೋಪವನ್ನು ರದ್ದುಗೊಳಿಸಿದ್ದಾರಾದರೂ, ಬಹುಪತ್ನಿತ್ವ ಹಾಗೂ ಏಕಮುಖ ತಲಾಖ್ ಪದ್ಧತಿಗಳು ಸಂವಿಧಾನವನ್ನು ಉಲ್ಲಂಘಿಸುತ್ತವೆ ಎಂಬತ್ತ ಗಮನ ಸೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸುವುದು ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ. ಸಂವಿಧಾನದ ಮೂರನೇ ಭಾಗದ ೪೪ನೇ ವಿಧಿಯಲ್ಲಿ ಹೇಳಿರುವಂತೆ ಸರ್ಕಾರವು ಸಮಾನ ನಾಗರಿಕ ಸಂಹಿತೆಯ ಮೂಲಕ ಪ್ರಜೆಗಳ ಹಕ್ಕನ್ನು ಕಾಪಾಡಬೇಕು. ಸರ್ಕಾರ ಬಹುಪತ್ನಿತ್ವವನ್ನು ಸಹಿಸಿಕೊಂಡರೆ ಅದು ಸ್ತ್ರೀಯರ ವಿಚಾರದಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಇದು ಕಾನೂನಾತ್ಮಕವಾಗಿ ಸರಿಯಲ್ಲ.
ಒಬ್ಬಾತ ಸ್ವಹಿತಾಸಕ್ತಿ ಅಥವಾ ಲೈಂಗಿಕ ಆಸಕ್ತಿಯಿಂದ ಒಂದಕ್ಕಿಂತ ಹೆಚ್ಚು ಮದುವೆಯಾಗುವುದು ಧರ್ಮಬಾಹಿರವೆಂದು ಕುರಾನ್ ಹೇಳುತ್ತದೆ. ಅನಾಥ ಮಕ್ಕಳ ಮತ್ತು ಅವರ ತಾಯಂದಿರ ರಕ್ಷಣೆಗಾಗಿ ಶರತ್ತುಬದ್ಧ ಬಹುಪತ್ನಿತ್ವವನ್ನು ಕುರಾನ್ ಮಾನ್ಯ ಮಾಡಿದೆ. ಇದನ್ನು ಮೌಲ್ವಿಗಳು ಮತ್ತು ಮುಸ್ಲಿಂ ಪುರುಷರು ಅರ್ಥ ಮಾಡಿಕೊಳ್ಳಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.