ಅಗ್ನಿ-4 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿ

ಭಾರತೀಯ ಸೇನೆ ಸೋಮವಾರ ನಡೆಸಿದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ...
ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ (ಸಂಗ್ರಹ ಚಿತ್ರ)
ಅಗ್ನಿ-4 ಕ್ಷಿಪಣಿ ಪರೀಕ್ಷೆ ಯಶಸ್ವಿ (ಸಂಗ್ರಹ ಚಿತ್ರ)

ಬಾಲಸೋರ್: ಭಾರತೀಯ ಸೇನೆ ಸೋಮವಾರ ನಡೆಸಿದ ಅಣ್ವಸ್ತ್ರ ಸಿಡಿತಲೆ ಹೊತ್ತೊಯ್ಯಬಲ್ಲ ಅಗ್ನಿ-4 ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಭೂಮಿಯ ಮೇಲ್ಮೈನಿಂದ ಮೇಲ್ಮೈಗೆ ಹಾರುವ ಖಂಡಾಂತರ ಕ್ಷಿಪಣಿ ಅಗ್ನಿ-4 ಕ್ಷಿಪಣಿಯನ್ನು ಎರಡನೇ ಬಾರಿಗೆ ಭಾರತೀಯ ಸೇನೆ ಪ್ರಯೋಗಕ್ಕೆ ಒಳಪಡಿಸಿದೆ. ಒಡಿಶಾದ ಬಾಲಸೋರ್  ನಲ್ಲಿರುವ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಲ್ಲಿರುವ ಉಡಾವಣಾ ಬ್ಲಾಕ್ ನಲ್ಲಿ ಕ್ಷಿಪಣಿಯನ್ನು ಇಂದು ಬೆಳಗ್ಗೆ ಸುಮಾರು 9.45ರಲ್ಲಿ ಯಶಸ್ವಿಯಾಗಿ ಉಡಾಯಿಸಲಾಯಿತು. ಕೇವಲ 20  ನಿಮಿಷದಲ್ಲಿ 800 ಕಿಮೀ ದೂರ ಕ್ರಮಿಸಿ ನಿಖರ ಗುರಿ ತಲುಪುವ ಮೂಲಕ ಅಗ್ನಿ-4 ಕ್ಷಿಪಣಿ ಯಶಸ್ವಿಯಾಯಿತು.

ಅಗ್ನಿ-4 ಕ್ಷಿಪಣಿ ಘನ ಇಂಧನ ಬಳಕೆ ಮಾಡುವ ಇಂಜಿನ್ ಹೊಂದಿದ್ದು, ಕ್ಷಿಪಣಿ ಉಡಾವಣೆಗೆ ವಿಶೇಷವಾಗಿ ಸಿದ್ಧಪಡಿಸಲಾಗಿದ್ದ ಮೊಬೈಲ್ ಲಾಂಚರ್ (ಕ್ಯಾನಿಸ್ಟರ್) ಮೂಲಕ ಅಗ್ನಿ-4  ಕ್ಷಿಪಣಿಯನ್ನು ಉಡಾವಣೆ ಮಾಡಲಾಗಿದೆ.

ಅಗ್ನಿ-4 ಕ್ಷಿಪಣಿಯು ಸುಮಾರು 17 ಟನ್ ತೂಕವಿದ್ದು, 20 ಮೀಟರ್ ಉದ್ದವಿದೆ. ಇಂದು ಬಾಲಾಸೋರ್ ನಲ್ಲಿ ನಡೆದಿರುವ ಪರೀಕ್ಷೆ 6ನೇ ಪರೀಕ್ಷೆಯಾಗಿದೆ. ಕ್ಷಿಪಣಿಯನ್ನು ಮೊದಲ ಬಾರಿಗೆ  2010 ಡಿಸೆಂಬರ್ 10ರಂದು ಪ್ರಯೋಗಕ್ಕೆ ಒಳಪಡಿಸಲಾಗಿತ್ತು. ಆದರೆ ಈ ಪರೀಕ್ಷಾರ್ಥ ಉಡಾವಣೆ ತಾಂತ್ರಿಕ ಲೋಪದೋಷದಿಂದಾಗಿ ಉಡಾವಣೆ ವಿಫಲವಾಗಿತ್ತು. ಬಳಿಕ ನವೆಂಬರ್ 15  2011ರಂದು ಎರಡನೇ, ಸೆಪ್ಟೆಂಬರ್ 19 2012ರಂದು ಮೂರನೇ, ಜನವರಿ 20 2014 ರಂದು ನಾಲ್ಕನೇ ಮತ್ತು ಡಿಸೆಂಬರ್ 2 2014ರಂದು ಐದನೇ ಪರೀಕ್ಷಾರ್ಥ ಉಡಾವಣೆಯನ್ನು  ಮಾಡಲಾಗಿತ್ತು. ಈ ಎಲ್ಲ ಪ್ರಯೋಗಗಳು ಯಶಸ್ವಿಯಾಗಿದ್ದವು.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಕ್ಷಣಾ ಇಲಾಖೆಯ ವಕ್ತಾರ ಸಿತಾಂಶು ಖರ್ ಅವರು, ಅಗ್ನಿ-4 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಎಲ್ಲ ವಿಭಾಗದಲ್ಲಿಯೂ ಯಶಸ್ವಿಯಾಗಿದೆ.  ಕರಾವಳಿಯಲ್ಲಿರುವ ರಾಡಾರ್ ವ್ಯವಸ್ಥೆಯ ನಿಯಂತ್ರಣ ಕೊಠಡಿಯಿಂದ ಕ್ಷಿಪಣಿಯ ನಿಖರ ಗುರಿ ತಲುಪಿರುವುದನ್ನು ಖಚಿತ ಪಡಿಸಿದೆ. ಯೋಜನೆಯ ಎಲ್ಲ ನಿರೀಕ್ಷೆಗಳೂ ಈಡೇರಿದ್ದು, ಈ  ಮೂಲಕ ಮತ್ತೊಂದು ಕನಸು ನನಸಾಗಿದೆ. ನಮ್ಮ ಪ್ರಕಾರ ಇದು ಶೇ. 200ರಷ್ಟು ಯಶಸ್ಸು ಗಳಿಸಿದ್ದು, ಇದಕ್ಕಿಂತ ಉತ್ತಮ ಪರಿಣಾಮವನ್ನು ನಾವು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು  ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com