
ನವದೆಹಲಿ: ಮೀಸಲಾತಿ ಕುರಿತಂತೆ ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಅವರು ನೀಡಿದ್ದ ಹೇಳಿಕೆ ಬಿಹಾರ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ ಎಂಬ ಮಾಧ್ಯಮ ಹಾಗೂ ರಾಜಕೀಯ ವಿಶ್ಲೇಷಕರ ಹೇಳಿಕೆಯನ್ನು ತಿರಸ್ಕರಿಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಮೀಸಲಾತಿ ಹೇಳಿಕೆ ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿಲ್ಲ ಎಂದು ಸೋಮವಾರ ಹೇಳಿದ್ದಾರೆ.
ಬಿಹಾರ ಫಲಿತಾಂಶ ಕುರಿತಂತೆ ಇಂದು ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವ ಅವರು, ಹಿಂದುಳಿದ ಜನರು ಒಗ್ಗೂಡಿದ್ದು ಲಾಲೂ ಹಾಗೂ ನಿತೀಶ್ ಕುಮಾರ್ ಅವರಿಗೆ ಮತ ಹಾಕಿದ್ದಾರೆ. ಮೀಸಲಾತಿ ಕುರಿತಂತೆ ನೀವು ನೀಡಿದ್ದ ಹೇಳಿಕೆ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರಿಲ್ಲ ಎಂದು ಹೇಳಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.
ಬಿಹಾರ ಚುನಾವಣೆಯೊಂದು ಹಿಂದುಳಿದ ಹಾಗೂ ಮೇಲ್ವರ್ಗದವರ ನಡುವೆ ನಡೆದ ಚುನಾವಣೆಯಾಗಿದೆ. ಹಿಂದುಳಿದ ನಾಯಕರನ್ನು ಅಭಿವ್ಯಕ್ತಗೊಳಿಸಲು ನಾವು ವಿಫಲರಾದೆವು. ಇದರ ಪ್ರತಿಫಲವೇ ಚುನಾವಣೆ ಮೇಲೆ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಲು ಮೀಸಲಾತಿ ಕುರಿತಂತೆ ಮೋಹನ್ ಭಾಗವತ್ ನೀಡಿದ್ದ ಹೇಳಿಕೆಯೇ ಕಾರಣ ಎಂದು ನಾರಾಯಣ ಯಾದವ್, ಅಶ್ವಿನಿ ಚೌಬೇ ಸೇರಿದಂತೆ ಇನ್ನಿತರೆ ಬಿಹಾರ ನಾಯಕರು ಭಾಗವತ್ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು.
ಆರ್ಎಸ್ಎಸ್ ಸಮಯವಲ್ಲದ ಸಮಯದಲ್ಲಿ ಮೀಸಲಾತಿ ಕುರಿತಂತೆ ಹೇಳಿಕೆ ನೀಡಿತ್ತು. ಮೇಲ್ಜಾತಿಯವರು ಮುಖ್ಯಮಂತ್ರಿಯಾದರೆ ತಮ್ಮ ಹಕ್ಕುಗಳು ಕಿತ್ತುಕೊಳ್ಳುವ ಪ್ರಯತ್ನ ನಡೆದು ಬಿಟ್ಟರೆ ಎಂಬ ಭಯದಲ್ಲಿ ನಿತೀಶ್ ಕುಮಾರ್ ಅವರಿಗೆ ಮತ ಹಾಕಿದ್ದಾರೆ. ಯಾವುದೇ ರಾಜ್ಯದಲ್ಲಿಯೇ ಆದರೂ ದೊಡ್ಡ ನಾಯಕರು, ಚಿಕ್ಕ ನಾಯಕರೆಂಬುದಿಲ್ಲ. ನಾವು ನಮ್ಮ ಸ್ಥಳೀಯ ನಾಯಕತ್ವವನ್ನು ಶಕ್ತಿಕಾರಿಯಾಗಿ ಮಾಡಬೇಕಿದೆ ಎಂದು ನಾರಾಯಣ್ ಯಾದವ್ ಹೇಳಿದ್ದರು.
ಇದರಂತೆ ಬಿಹಾರ ಚುನಾವಣೆ ಸೋಲಿನ ಪರಾಮರ್ಶೆಗೆ ಮುಂದಾಗಿರುವ ಬಿಜೆಪಿ ನಾಯಕರು ಸಂಸದೀಯ ಮಂಡಳಿ ಸಭೆ ನಡೆಸಲು ತೀರ್ಮಾನಿಸಿದ್ದು, ಇಂದು ಸಂಜೆ ಸಂಸದೀಯ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ ಪಕ್ಷದ ವಿರುದ್ಧ ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದ ಶತ್ರುಜ್ಞ ಸಿನ್ಹಾ ಮತ್ತು ಆರ್.ಕೆ.ಸಿಂಗ್ ವಿರುದ್ಧ ಕ್ರಮ ಕೈಗೊಳ್ಳುವ ಸಂಭವವಿದೆ ಎಂದು ಹೇಳಲಾಗುತ್ತಿದೆ.
Advertisement