ಬಿಹಾರ ಸೋಲು: ಮೋದಿ, ಅಮಿತ್ ಶಾ ಬೆನ್ನಿಗೆ ನಿಂತ ನಿತಿನ್ ಗಡ್ಕರಿ
ನವದೆಹಲಿ: ಬಿಹಾರ ಚುನಾವಣೆ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ದೂಷಣೆ ಮಾಡುವುದು ನ್ಯಾಯವಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಹೇಳಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಸೋಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಅವರೇ ನೇರ ಕಾರಣವಾಗಿದ್ದಾರೆಂಬ ಆರೋಪಗಳ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಪಕ್ಷ ಒಂದು ಪಕ್ಷವಷ್ಟೇ. ಇಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದೇವೆ. ಗೆಲವು ಮತ್ತು ಸೋಲಿಗೆ ಇಲ್ಲಿ ಎಲ್ಲರೂ ಹೊಣೆಗಾರರಾಗುತ್ತೇವೆ. ಅಡ್ವಾಣಿ ಅವರು ಅಧಿಕಾರದಲ್ಲಿದ್ದ ಸಂದರ್ಭದಲ್ಲೂ ಬಿಜೆಪಿ ಬಿಹಾರದಲ್ಲಿ ಸೋಲು ಕಂಡಿತ್ತು ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಸೋಲು ಕಂಡಿದ್ದೇವೆ. ಇದಕ್ಕೆ ಪ್ರಮುಖ ಕಾರಣ ಮೂರು ಪಕ್ಷಗಳು ಮೈತ್ರಿಕೂಟ ರಚನೆ ಮಾಡಿದ್ದಾಗಿದೆ. ಇದರಲ್ಲಿ ನಮ್ಮ ಲೆಕ್ಕಾಚಾರವೂ ತಪ್ಪಾಗಿತ್ತು. ನಮ್ಮ ಶೇಕಡಾವಾರು ಮತದಾನದ ಸಂಖ್ಯೆಯನ್ನು 5-7ರಷ್ಟು ಹೆಚ್ಚಳ ಮಾಡಿಕೊಳ್ಳುವ ಅಗತ್ಯವಿದೆ. ಈ ಹಿಂದೆಯೂ ಬಿಜೆಪಿ ಸೋಲು, ಗೆಲವುಗಳನ್ನು ನೋಡಿದೆ. ನಮ್ಮ ಪಕ್ಷ ಎಂದಿಗೂ ವ್ಯಕ್ತಿಗತ ಪಕ್ಷವಾಗಲಾರದು ಎಂದು ಹೇಳಿದ್ದಾರೆ. ಇದೇ ವೇಳೆ ಅನಧಿಕೃತವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದ ಅವರು ಇಂತಹ ನಾಯಕರ ವಿರುದ್ಧ ಪಕ್ಷವು ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

