ಫೇಲಾದೆ ಎಂದು ಆತ್ಮಹತ್ಯೆ ಮಾಡಿಕೊಂಡ, ಆತ್ಮಹತ್ಯೆಯ 4 ತಿಂಗಳ ಬಳಿಕ ಪಾಸಾದ..!

ತನಗಿಷ್ಟವಾದ ವಿಷಯದಲ್ಲಿಯೇ ಫೇಲಾದೆ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ತಿಂಗಳ ಬಳಿಕ ಆತ ಪಾಸಾಗಿದ್ದಾನೆ ವಿವಿ ಘೋಷಿಸಿರುವ ವಿಲಕ್ಷಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ...
ಫೇಲಾದೆ ಎಂದು ಆತ್ಮಹತ್ಯೆಗೆ ಶರಣಾದ ಅದ್ನಾನ್ ಹಿಲಾಲ್ (ಸಂಗ್ರಹ ಚಿತ್ರ)
ಫೇಲಾದೆ ಎಂದು ಆತ್ಮಹತ್ಯೆಗೆ ಶರಣಾದ ಅದ್ನಾನ್ ಹಿಲಾಲ್ (ಸಂಗ್ರಹ ಚಿತ್ರ)

ಶ್ರೀನಗರ: ತನಗಿಷ್ಟವಾದ ವಿಷಯದಲ್ಲಿಯೇ ಫೇಲಾದೆ ಎಂದು ಮನನೊಂದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ನಾಲ್ಕು ತಿಂಗಳ ಬಳಿಕ ಆತ ಪಾಸಾಗಿದ್ದಾನೆ ವಿವಿ ಘೋಷಿಸಿರುವ  ವಿಲಕ್ಷಣ ಘಟನೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ನಡೆದಿದೆ.

ಶ್ರೀನಗರದ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ 17 ವರ್ಷದ ಮಹಮದ್ ಅದ್ನಾನ್ ಹಿಲಾಲ್ ಎಂಬ ವಿದ್ಯಾರ್ಥಿಯೇ ಈ ಘಟನೆಯ ದುರಂತ  ನಾಯಕನಾಗಿದ್ದು, ತನಗಿಷ್ಟವಾದ ವಿಷಯದಲ್ಲಿಯೇ ಫೇಲಾದೆ ಎಂದು ಭಾವಿಸಿ ಆತ ಆತ್ಮಹತ್ಯೆಗೀಡಾಗಿದ್ದ. ಆದರೆ ಆತನ ಉತ್ತರ ಪತ್ರಿಕೆಯನ್ನು ಮರು-ಮೌಲ್ಯಮಾಪನ ಮಾಡಿದಾಗ ಆತ  ಪಾಸಾಗಿರುವುದು ತಿಳಿದುಬಂದಿದೆ.

ಪರೀಕ್ಷಾ ಫಲಿತಾಂಶದಲ್ಲಿ ಹಿಲಾಲ್ ಗೆ ಭೌತಶಾಸ್ತ್ರ ವಿಷಯದಲ್ಲಿ 100 ಅಂಕಗಳಿಗೆ ಕೇವಲ 28 ಅಂಕ ಬಂದಿದೆ ಎಂದು ಫಲಿತಾಂಶದಲ್ಲಿ ತೋರಿಸಲಾಗಿತ್ತು. ಇದರಿಂದ ತೀವ್ರ ಮನನೊಂದ  ಹಿಲಾಲ್ ಕಳೆದ ಜೂನ್ ನಲ್ಲಿ ಝೇಲಂ ನದಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ. ಹಿಲಾಲ್ ಮೃತ ದೇಹವನ್ನು ಸ್ಥಳೀಯ ಮೀನುಗಾರರು ಹೊರತೆಗೆದಿದ್ದರು. ಹಿಲಾಲ್ ಹಠಾತ್ ಮರಣದಿಂದಾಗಿ  ತೀವ್ರವಾಗಿ ನೊಂದಿದ್ದ ಆತನ ಪೋಷಕರು ಇದು ಆತ್ಮಹತ್ಯೆಯಲ್ಲ ಬದಲಿಗೆ ಶಿಕ್ಷಣ ವ್ಯವಸ್ಥೆ ಮಾಡಿರುವ ಕೊಲೆ ಎಂದು ಆರೋಪಿಸಿದ್ದರು.

ಹಿಲಾಲ್ ನ ತಂದೆ ಗಿಲ್ಕರ್ ಅವರು ಹೇಳುವಂತೆ ಭೌತಶಾಸ್ತ್ರದ ಪರೀಕ್ಷಾ ದಿನ ತಾವು ಹಿಲಾಲ್ ಅನ್ನು ವಿಚಾರಿಸಿದ್ದೆವು. ಆತ ಪರೀಕ್ಷೆಯಲ್ಲಿ ತುಂಬಾ ಚೆನ್ನಾಗಿ ಬರೆದಿರುವುದಾಗಿ ಆತ್ಮ  ವಿಶ್ವಾಸದಿಂದ ಹೇಳಿದ್ದ. ಆದರೆ ಫಲಿತಾಂಶದಲ್ಲಿ ಆತ ಫೇಲಾಗಿದ್ದಾನೆ ಎಂದು ತೋರಿಸಿತ್ತು. ಇಂಟರ್ ನೆಟ್ ಫಲಿತಾಂಶ ನೋಡಿದ ಆತ ತೀವ್ರವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ  ಎಂದು ಹೇಳಿದ್ದಾರೆ.

"ಹಿಲಾಲ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ತನ್ನ ಮೊದಲ ಸೆಮಿಸ್ಟರ್ ನಲ್ಲಿ ಶೇ.70 ರಷ್ಟು ಅಂಕಗಳಿಸುವ ಮೂಲಕ ಇಡೀ ತರಗತಿಗೇ ಟಾಪರ್ ಆಗಿದ್ದ. ಇಂತಹ ವಿದ್ಯಾರ್ಥಿ  ಫೇಲಾಗುವುದೇ ಅದೂ ಆತನ ನೆಚ್ಚಿನ ವಿಷಯವಾದ ಭೌತಶಾಸ್ತ್ರ ವಿಭಾಗದಲ್ಲಿ.. ಎಂದು ಗಿಲ್ಕರ್ ಪ್ರಶ್ನಿಸಿದ್ದಾರೆ. ಪರೀಕ್ಷೆಗೆ ಸಂಬಂಧಿಸಿದಂತೆ ಮಗ ನೀಡಿದ್ದ ಪ್ರತಿಕ್ರಿಯೆಯ ಮೇರೆಗೆ ಹಿಲಾಲ್  ತಂದೆ ಗಿಲ್ಕರ್ ಆತನ ಭೌತಶಾಸ್ತ್ರ ಉತ್ತರ ಪತ್ರಿಕೆಯ ಮರುಮೌಲ್ಯಮಾಪನಕ್ಕೆ ಕಳೆದ ಜೂನ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದರ ಫಲಿತಾಂಶ ಇದೀಗ ಲಭ್ಯವಾಗಿದ್ದು, ಹಿಲಾಲ್ 48 ಅಂಕಗಳನ್ನು  ಪಡೆಯುವ ಮೂಲಕ ತೇರ್ಗಡೆ ಹೊಂದಿದ್ದಾನೆ.

ಆದರೆ ಈ ಫಲಿತಾಂಶವನ್ನು ನೋಡಲು ಹಿಲಾಲ್ ಮಾತ್ರ ಈಗಿಲ್ಲ. ಆತುರ ಪಟ್ಟು ಹಿಲಾಲ್ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾನೆ. ವಿವಿ ಮಾಡಿದ ಯಡವಟ್ಟಿಗೆ ಇದೀಗ ಓರ್ವ ಪ್ರತಿಭಾವಂತ  ವಿದ್ಯಾರ್ಥಿಯ ಕುಟುಂಬ ಕಣ್ಣೀರು ಹಾಕುವಂತಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com