
ವಾರಣಾಸಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ವಿದೇಶಿ ಮಹಿಳೆಯೊಬ್ಬರ ಮೇಲೆ ಶುಕ್ರವಾರ ಆಸಿಡ್ ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ರಷ್ಯಾ ಮಹಿಳೆ ಮೇಲೆ ಆಕೆ ತಂಗಿದ್ದ ನಿವಾಸದ ಮಾಲೀಕನ ಮೊಮ್ಮಗನೇ ಆಸಿಡ್ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಮಹಿಳೆ ತನ್ನ ತವರಾದ ರಷ್ಯಾಗೆ ವಾಪಸ್ ತೆರಳುವುದನ್ನು ವಿರೋಧಿಸಿದ್ದ ಪಿಜಿ ಮಾಲೀಕ ಶ್ರೀವಾತ್ಸವ್ ಅವರ ಮೊಮ್ಮಗ ಸಿದ್ಧಾರ್ಥ್ ಎಂಬಾತ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಸ್ತುತ ಸಿದ್ಧಾರ್ಥ್ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಅಲ್ಲದೆ ಸಿದ್ಧಾರ್ಥ್ ಗೆ ಆಸಿಡ್ ದೊರೆಯುವಲ್ಲಿ ಸಹಾಯಕರಾದ ಆತನ ಇಬ್ಬರು ಸ್ನೇಹಿತರನ್ನು ವಾರಣಾಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಪಡೆದಿದ್ದಾರೆ.
ಘಟನೆ ವಿವರ
ಮೂಲತಃ ರಷ್ಯಾದ ಮಾಸ್ಕೋ ನಿವಾಸಿಯಾದ ಮಹಿಳೆ ಭಾರತ ಪ್ರವಾಸಕ್ಕೆ ಆಗಮಿಸಿದ್ದರು. ಕಳೆದ ಮೂರು ದಿನಗಳ ಹಿಂದಷ್ಟೇ ಆಕೆ ಉತ್ತರ ಪ್ರದೇಶದ ವಾರಣಾಸಿಗೆ ಆಗಮಿಸಿದ್ದರು. ಅಲ್ಲಿ ಸ್ಥಳೀಯ ನಿವಾಸಿ ಶ್ರೀವಾತ್ಸವ್ ಎಂಬುವವರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿದ್ದರು. ಶ್ರೀವಾತ್ಸವ್ ಅವರ ಮೊಮ್ಮಗ ಸಿದ್ಧಾರ್ಥ್ ವಿದೇಶಿ ಮಹಿಳೆಯೊಂದಿಗೆ ಸಲುಗೆಯಿಂದ ಇದ್ದು, ಇತ್ತೀಚೆಗಷ್ಟೇ ಇಬ್ಬರೂ ಲಡಾಖ್ ಗೆ ಹೋಗಿ ವಾಪಸಾಗಿದ್ದರು. ಹೀಗಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಮಹಿಳೆಯ ವೀಸಾ ಅವಧಿ ಮುಗಿದ ಹಿನ್ನಲೆಯಲ್ಲಿ ಆಕೆ ತನ್ನ ತವರಿಗೆ ವಾಪಸಾಗಲು ಸಿದ್ಧತೆ ನಡೆಸಿದ್ದಳು.
ಮಹಿಳೆ ರಷ್ಯಾಗೆ ವಾಪಸ್ ಆಗುವುದನ್ನು ವಿರೋಧಿಸಿದ್ದ ಸಿದ್ಧಾರ್ಥ್ ಆಕೆಯ ಮನವೊಲಿಸಲು ಯತ್ನಿಸಿದ್ದ. ಆದರೆ ಮಹಿಳೆ ಇದಕ್ಕೆ ಒಪ್ಪದೇ ಇದ್ದಾಗ ಸಿದ್ಧಾರ್ಥ್ ತನ್ನ ಸ್ನೇಹಿತರ ನೆರವಿನಿಂದ ಆಸಿಡ್ ತರಿಸಿಕೊಂಡು ಮತ್ತೊಮ್ಮೆ ಆಕೆಯನ್ನು ಮನವೊಲಿಸುವ ಯತ್ನ ಮಾಡಿದ್ದಾನೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕ್ರೋಧಗೊಂಡ ಸಿದ್ಧಾರ್ಥ್ ಆಕೆಯ ಮೇಲೆ ಆಸಿಡ್ ಎರಚಿದ್ದಾನೆ. ಆಸಿಡ್ ದಾಳಿಯಿಂದಾಗಿ ವಿದೇಶಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದು, ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
Advertisement