
ನವದೆಹಲಿ: ಪ್ಯಾರಿಸ್‍ನಲ್ಲಿ ಶುಕ್ರವಾರ ನಡೆದ ದಾಳಿಯು 26/11ರ ಮುಂಬೈ ದಾಳಿಯ ಕರಾಳತೆಯನ್ನು ನೆನಪಿಸಿದೆ. ಜತೆಗೆ, ಎರಡೂ ದಾಳಿಗೆ ಬಹಳಷ್ಟು ಸಾಮ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಬೈನಲ್ಲಿ ಸತತ 3 ದಿನಗಳ ಕಾಲ ನಡೆದ ದಾಳಿಯು ಇಡೀ ವಿಶ್ವವನ್ನೇ ಆಘಾತಕ್ಕೊಳಪಡಿಸಿತ್ತು. ಅಂದು ತಾಜ್ ಹೋಟೆಲ್, ಒಬೆರಾಯ್ ಹೋಟೆಲ್, ಛತ್ರಪತಿ ಶಿವಾಜಿ ಟರ್ಮಿನಸ್ ಹೀಗೆ ಏಕಕಾಲದಲ್ಲಿ ವಿವಿಧ ಗುಂಪುಗಳು ಸರಣಿ ದಾಳಿಗಳು ನಡೆದಿದ್ದವು. ಈ ಬಾರಿ ಪ್ಯಾರಿಸ್‍ನಲ್ಲಿ ಕೂಡ ಇದೇ ಮಾದರಿಯ ದಾಳಿ ನಡೆಸಲಾಯಿತು. ಅಲ್ಲದೆ, ರೆಸ್ಟೋರೆಂಟ್, ಜನಜಂಗುಳಿಯಿರುವ ಪ್ರದೇಶಗಳಂತಹ ಸಾಫ್ಟ್ ಟಾರ್ಗೆಟ್‍ಗಳನ್ನೇ ಆಯ್ಕೆ ಮಾಡಲಾಯಿತು ಎಂದಿದ್ದಾರೆ ಡಬ್ಲ್ಯುಬಿಝೆಡ್-ಟಿವಿ ಭದ್ರತಾ ವಿಶ್ಲೇಷಕ ಎಡ್ ಡೇವಿಸ್. ``26/11ರ ಕಾಪಿಕ್ಯಾಟ್ ದಾಳಿಯನ್ನು ನಾವೂ ಎದುರಿಸುವ ಸಾಧ್ಯತೆಯಿದೆ ಎಂಬ ಭಯ ಆಗಾಗ್ಗೆ ಕಾಡುತ್ತಿತ್ತು. ಈಗ ಅದು ನಿಜವಾಯಿತು'' ಎಂದಿದ್ದಾರೆ ಪ್ಯಾರಿಸ್‍ನ ವಾಯು ಪಡೆಯ ನಿವೃತ್ತ ಜನರಲ್ ಮೈಕೆಲ್ ಹೇಡೆನ್.
ಭಾರತದಲ್ಲೂ ಕಟ್ಟೆಚ್ಚರ, ಎಲ್ಲೆಡೆ ಬಿಗಿಭದ್ರತೆ: ಪ್ಯಾರಿಸ್ ದಾಳಿಯ ಬಳಿಕ ಗುಪ್ತಚರ ಸಂಸ್ಥೆಗಳ ಎಚ್ಚರಿಕೆ ಹಿನ್ನೆಲೆಯಲ್ಲಿ ದೆಹಲಿ, ಮುಂಬೈ ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೆಹಲಿಯ ಫ್ರಾನ್ಸ್ ರಾಯಭಾರ ಕಚೇರಿ, ಸರ್ಕಾರಿ ಕಟ್ಟಡಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿದೆ. ಅಲರ್ಟ್ ಆಗಿರುವಂತೆ ಎಲ್ಲ ಪೊಲೀಸ್ ಠಾಣೆಗಳಿಗೂ ಸಂದೇಶ ರವಾನಿಸಲಾಗಿದೆ.
ರಾಷ್ಟ್ರಗೀತೆ ಹಾಡುತ್ತಾ ಹೊರಬಂದರು!: ಇದು ಅಚ್ಚರಿಯಾದರೂ ಸತ್ಯ. ಪ್ಯಾರಿಸ್‍ನ ನ್ಯಾಷನಲ್ ಸ್ಟೇಡಿಯಂ ಸಮೀಪದಲ್ಲಿ 2 ಸ್ಫೋಟ ಸಂಭವಿಸುತ್ತಿದ್ದಂತೆ ಬೆಚ್ಚಿಬಿದ್ದ ಜನ, ಮೊದಲು ಮೈದಾನ ದತ್ತ ಓಡಿದರು. ಭಯ ಆವರಿಸಿದ್ದರೂ ಧೈರ್ಯಗುಂದದ ನಾಗರಿಕರು, ಸ್ಟೇಡಿಯಂನ ಎಲ್ಲ ನಿರ್ಗಮನ ದ್ವಾರಗಳೂ ಸುರಕ್ಷಿತ ಎಂದು ಘೋಷಿಸುವುದನ್ನೇ ಕಾಯುತ್ತಿದ್ದರು. ಬಳಿಕ, ನಿರ್ಗಮನ ದ್ವಾರದ ಮೂಲಕ ಹೊರಬರುವಾಗ ಪ್ರತಿಯೊಬ್ಬರೂ ಫ್ರಾನ್ಸ್ ನ ರಾಷ್ಟ್ರಗೀತೆ ಹಾಡುತ್ತಾ ಹೊರಬಂದಿದ್ದು ಎಲ್ಲರನ್ನೂ ದಂಗಾಗಿಸಿತು. ಇಂತಹ ಭಯಾನಕ ಸ್ಥಿತಿಯಲ್ಲೂ ಒಗ್ಗಟ್ಟು ಪ್ರದರ್ಶಿಸಿದ ಫ್ರಾನ್ಸ್ ಜನತೆಗೆ ಇಡೀ ವಿಶ್ವವೇ ಹ್ಯಾಟ್ಸ್ ಆಫ್ ಹೇಳಿತು.
ಅಪರಿಚಿತರಿಗೂ ಆಶ್ರಯ ಕಲ್ಪಿಸಿದ ಟ್ವಿಟರ್ ಹ್ಯಾಂಡಲ್: ಸರಣಿ ದಾಳಿಯಿಂದ ನಡುಗಿಹೋಗಿದ್ದ ಪ್ಯಾರಿಸ್‍ಗೆ ಸಾಮಾಜಿಕ ಜಾಲತಾಣ ವರವಾಗಿ ಪರಿಣಮಿಸಿದವು. ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಟ್ವಿಟರ್‍ನಲ್ಲಿ `ಪೋರ್ಟಿಯೋವರ್ಟೆ'(ತೆರೆದ ಬಾಗಿಲು) ಎಂಬ ಹ್ಯಾಷ್‍ಟ್ಯಾಗ್ ಅನ್ನು ಸೃಷ್ಟಿಸಲಾಯಿತು. ದಾಳಿ ನಡೆದ ಪ್ರದೇಶಗಳ ಸುತ್ತಮುತ್ತಲಿನ ಜನರು ಅಪಾಯದಲ್ಲಿದ್ದರೆ ಅಥವಾ ಮನೆಯಲ್ಲಿರಲು ಹೆದರುತ್ತಿದ್ದರೆ, ಅಂಥವರಿಗೆ ಆಶ್ರಯ ನೀಡಲು ಸಾವಿರಾರು ಮಂದಿ ಮುಂದೆ ಬಂದರು.
ಈ ಹ್ಯಾಷ್‍ಟ್ಯಾಂಗ್ ಜಾಗತಿಕವಾಗಿ ಟ್ರೆಂಡಿಂಗ್ ಆಯಿತಲ್ಲದೆ, 4 ಲಕ್ಷಕ್ಕೂ ಹೆಚ್ಚು ಟ್ವೀಟ್‍ಗಳು ಹರಿದುಬಂದವು. ಎಷ್ಟೋ ಮಂದಿ ತಮ್ಮ ತಮ್ಮ ಮನೆಗಳ ವಿಳಾಸಗಳನ್ನು ನೀಡಿ, ಅಪಾಯದಲ್ಲಿರುವವರಿಗೆ ಆಹ್ವಾನವಿತ್ತರು. ಅಪರಿಚಿತರಿಗೂ ಆಶ್ರಯ ಕಲ್ಪಿಸಲು ಜನ ಹಿಂದೆ ಮುಂದೆ ನೋಡಲಿಲ್ಲ. ಒಟ್ಟಿನಲ್ಲಿ, ದುರಂತದ ಸಮಯದಲ್ಲಿ ಫ್ರಾನ್ಸ್ ಜನತೆಯ ಪ್ರತಿಕ್ರಿಯೆ ಮಾತ್ರ ಎಲ್ಲರಿಗೂ ಪಾಠವಾಯಿತು. ಇದೇ ವೇಳೆ, ದಾಳಿ ಹಿನ್ನೆಲೆಯಲ್ಲಿ ಫ್ರಾನ್ಸ್ ನಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಿದ್ದು, 3 ದಿನ ಶೋಕಾಚರಣೆ ನಡೆಯಲಿದೆ.
Advertisement