ತಮಿಳುನಾಡಿನಲ್ಲಿ ಮಳೆ: ರಕ್ಷಣೆಗೆ ಸೇನೆ, ವಾಯುಪಡೆ ರವಾನೆ

ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರ ರಕ್ಷಣೆಗೆ ಸೇನಾಪಡೆ ಮತ್ತು ವಾಯುಪಡೆ...
ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆ ದಾಟಲು ಹರಸಾಹಸಪಡುತ್ತಿರುವ ಮಹಿಳೆ, ಬಲಚಿತ್ರದಲ್ಲಿ ವೃದ್ಧೆಯೊಬ್ಬರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವುದು.
ಭಾರೀ ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು, ರಸ್ತೆ ದಾಟಲು ಹರಸಾಹಸಪಡುತ್ತಿರುವ ಮಹಿಳೆ, ಬಲಚಿತ್ರದಲ್ಲಿ ವೃದ್ಧೆಯೊಬ್ಬರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುತ್ತಿರುವುದು.
Updated on

ಚೆನ್ನೈ: ಚಂಡಮಾರುತದಿಂದಾಗಿ ತಮಿಳುನಾಡಿನಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ಅಪಾಯದಲ್ಲಿ ಸಿಕ್ಕಿ ಹಾಕಿಕೊಂಡಿರುವ ಜನರ ರಕ್ಷಣೆಗೆ ಸೇನಾಪಡೆ ಮತ್ತು ವಾಯುಪಡೆ ಸನ್ನದ್ಧವಾಗಿದೆ. ದಕ್ಷಿಣ ಚೆನ್ನೈಯಲ್ಲಿ ಮಳೆಯಿಂದಾಗಿ ಸುಮಾರು 2 ಸಾವಿರ ಜನರ ರಕ್ಷಣೆಗೆ ಸೇನಾಪಡೆ ಆಗಮಿಸಿದೆ. ನಿನ್ನೆ ಮನೆಯ ಸುತ್ತಮುತ್ತ ನೀರು ತುಂಬಿ ಮುಳುಗಡೆ ಭೀತಿಯಲ್ಲಿದ್ದ 12 ಮಕ್ಕಳು ಸೇರಿದಂತೆ 22 ಮಂದಿಯನ್ನು ವಿಮಾನದ ಮೂಲಕ ಮೇಲೆತ್ತಲಾಯಿತು.ಇಂದು ಇನ್ನಷ್ಟು ಹೆಲಿಕಾಪ್ಟರ್ ಗಳು ಮತ್ತು ದೋಣಿಗಳನ್ನು ಜನರ ಸೇವೆಗೆ ಕಳುಹಿಸಲಾಗಿದೆ.

ತಮಿಳುನಾಡಿನಲ್ಲಿ ಸದ್ಯ ಪರಿಸ್ಥಿತಿ ಈ ರೀತಿ ಇದೆ:
1. ಸದ್ಯದ ಮಟ್ಟಿಗೆ ಚೆನ್ನೈ ನಗರದಲ್ಲಿ ಮಳೆ ಇಲ್ಲ. ಆದರೆ ನಗರದ ಕೆಲವು ಭಾಗಗಳು ಇನ್ನೂ ಕೂಡ ನೀರಿನಿಂದ ತುಂಬಿಕೊಂಡಿದೆ. ಅದರಲ್ಲೂ ತಂಬರಂನಂತಹ ಪ್ರದೇಶಗಳು ಸಂಪೂರ್ಣ ನೀರಿನಿಂದ ಆವೃತವಾಗಿವೆ.
2. ತಂಬರಮ್ ನ ಮುದುಚುರಿ ಅಶೋಕ್ ನಗರ ಪ್ರದೇಶದಲ್ಲಿ ನಿನ್ನೆ 12 ಮಂದಿ ಮಕ್ಕಳು ಮತ್ತು 10 ಮಂದಿ ವಯಸ್ಕರನ್ನು ವಿಮಾನದ ಸಹಾಯದಿಂದ ರಕ್ಷಿಸಲಾಗಿದೆ. ಆ ಪ್ರದೇಶ ಸಂಪೂರ್ಣ ಜಲಾವೃತವಾಗಿದೆ. ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಕಾರ್ಯ ನಡೆಯುತ್ತಿದೆ.
3. ಎರಡು ಭಾರೀ ಗಾತ್ರದ ವಿಮಾನಗಳು, ಎರಡು ಅತ್ಯಾಧುನಿಕ ಹಗುರ ವಿಮಾನ ಮತ್ತು ಮಿಗ್-17 ವಿಮಾನಗಳನ್ನು ರಕ್ಷಣಾ ಕಾರ್ಯಚರಣೆಗೆ ಬಳಸಿಕೊಳ್ಳಲಾಗಿದೆ.ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯನ್ನು ನಿಯೋಜಿಸಲಾಗಿದ್ದು, ದೋಣಿಗಳನ್ನು ಬಳಸಿಕೊಳ್ಳಲಾಗುತ್ತಿದೆ.
4. ನೆರೆ ಬಂದ ಪ್ರದೇಶಗಳ ಜನರಿಗಾಗಿ ವಾಯುಪಡೆ ನೀರು ಮತ್ತು ಆಹಾರ ಪೊಟ್ಟಣಗಳನ್ನು ಮೇಲಿನಿಂದ ಎಸೆಯುತ್ತಿದೆ.
5. ಸೆಂಬರಂಬಕ್ಕಮ್ ಜಲಾಶಯದಿಂದ ಹಠಾತ್ ಪ್ರವಾಹ ಬರುವ ಸಾಧ್ಯತೆಯಿರುವುದರಿಂದ ಕೊಟ್ಟೂರ್ ಪುರಂನಿಂದ ಜನರನ್ನು ಬೇರೆಡೆಗೆ ಕಳುಹಿಸಲಾಗಿದೆ.
6. ಕಳೆದ ರಾತ್ರಿಯಿಂದ ಚೆನ್ನೈ ನಗರದಲ್ಲಿ 4 ಸೆಂ.ಮೀ ಮಳೆಯಾಗಿದೆ. ಇಂದು ಸಾಧಾರಣ ಮಳೆ ನಗರದಲ್ಲಿ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಿಂದ ಚೆನ್ನೈ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಅವ್ಯಾಹತ ಮಳೆ ಸುರಿಯುತ್ತಿದ್ದು, ಇದೀಗ ಆಂಧ್ರಪ್ರದೇಶದ ಕಾವಲಿ ಕಡೆಯೂ ಭಾರೀ ಮಳೆ ಬೀಳುವ ನಿರೀಕ್ಷೆಯಿದೆ. ಇಂದು ತಮಿಳುನಾಡಿನ ಉತ್ತರ ತೀರ ಪ್ರದೇಶದಲ್ಲಿ ಮಳೆ ಸುರಿಯುವ ಸಾಧ್ಯತೆ ಹೆಚ್ಚಾಗಿದೆ. ಕದ್ದಲೂರು ಜಿಲ್ಲೆ ಮಳೆಗೆ ಭಾರೀ ಹಾನಿಗೊಳಗಾದ ಪ್ರದೇಶವಾಗಿದೆ.
7. ಇದುವರೆಗೆ ಮಳೆಯಿಂದ ಹಾನಿಗೀಡಾದ ಪ್ರದೇಶಗಳ  ಜನರ ಪುನರ್ವಸತಿ ಮತ್ತು ಪರಿಹಾರಕ್ಕಾಗಿ ಮುಖ್ಯಮಂತ್ರಿ ಜಯಲಲಿತಾ 500 ಕೋಟಿ ರೂಪಾಯಿ ಘೋಷಿಸಿದ್ದಾರೆ. ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿರುವ 5 ಸಾವಿರಕ್ಕೂ ಹೆಚ್ಚು ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಸರ್ಕಾರ 90 ಸಾವಿರ ಆಹಾರದ ಪೊಟ್ಟಣಗಳನ್ನು ಹಂಚಿದೆ.
8. ಚೆನ್ನೈ, ತಿರುವಲ್ಲೂರು ಮತ್ತು ಕಂಚೀಪುರಂ ಜಿಲ್ಲೆಗಳಲ್ಲಿ ಶಾಲಾ, ಕಾಲೇಜುಗಳು ಇಂದು ಸಹ ಮುಚ್ಚಿರುತ್ತವೆ. ಅಣ್ಣಾ ವಿಶ್ವವಿದ್ಯಾಲಯ ನಡೆಸಬೇಕಿದ್ದ ಪರೀಕ್ಷೆ ಮಳೆ ಹಿನ್ನೆಲೆಯಲ್ಲಿ ಮುಂದೆ ಹೋಗಿದೆ.
9. ಇದೇ ತಿಂಗಳ 9ನೇ ತಾರೀಖಿನಿಂದ ಇಲ್ಲಿಯವರೆಗೆ ವ್ಯಾಪಕ ಮಳೆಯಿಂದಾಗಿ 71 ಮಂದಿ ಸಾವಿಗೀಡಾಗಿದ್ದಾರೆ. ರೈಲು ಸಂಚಾರ ಸ್ಥಗಿತಗೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com