ಕಚೇರಿಯಲ್ಲೇ ಚಿತ್ತೂರು ಮೇಯರ್ ಹತ್ಯೆ..!

ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮೇಯರ್ ಕಟಾರಿ ಅನುರಾಧ ಅವರನ್ನು ಮಂಗಳವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...
ಚಿತ್ತೂರು ಮೇಯರ್ ಕಟಾರಿ ಅನುರಾಧ ಮತ್ತು ಪತಿ ಮೋಹನ್ (ಸಂಗ್ರಹ ಚಿತ್ರ)
ಚಿತ್ತೂರು ಮೇಯರ್ ಕಟಾರಿ ಅನುರಾಧ ಮತ್ತು ಪತಿ ಮೋಹನ್ (ಸಂಗ್ರಹ ಚಿತ್ರ)

ಚಿತ್ತೂರು: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮೇಯರ್ ಕಟಾರಿ ಅನುರಾಧ ಅವರನ್ನು ಮಂಗಳವಾರ ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

ಚಿತ್ತೂರು ಜಿಲ್ಲೆಯಲ್ಲಿರುವ ಮುನ್ಸಿಪಲ್ ಕಾರ್ಪೋರೇಷನ್ ಗೆ ಮಧ್ಯಾಹ್ನ 12 ಗಂಟೆಯ ಸುಮಾರಿನಲ್ಲಿ ಬುರ್ಖಾ ಧರಿಸಿ ಆಗಮಿಸಿದ್ದ ದುಷ್ಕರ್ಮಿಗಳು ನೋಡನೋಡುತ್ತಿದ್ದಂತೆಯೇ ಮೇಯರ್ ಅನುರಾಧ ಮತ್ತು ಅವರ ಪತಿ ಮೋಹನ್ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ತೀರಾ ಹತ್ತಿರದಿಂದಲೇ ಗುಂಡಿನ ದಾಳಿ ನಡೆಸಿದ ಪರಿಣಾಮ ಅನುರಾಧ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಅನುರಾಧ ಅವರ ಪತಿ ಮೋಹನ್ ಕೂಡ ಕಚೇರಿಯಲ್ಲಿಯೇ ಇದ್ದು, ಅವರ ಮೇಲೂ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮೋಹನ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಟಾರಿ ಅನುರಾಧ ಅವರು ತೆಲುಗುದೇಶಂ ಪಕ್ಷದ ಮುಖಂಡರಾಗಿದ್ದು, ದಾಳಿ ಹಿಂದೆ ಅವರದ್ದೇ ಪಕ್ಷದವರ ಕೈವಾಡದ ಶಂಕೆವ್ಯಕ್ತವಾಗುತ್ತಿದೆ. ಇನ್ನು ಟಿಡಿಪಿ ಪಕ್ಷದ ಮೂಲಗಳ ಪ್ರಕಾರ ಚಿತ್ತೂರು ಮೇಯರ್ ಆಯ್ಕೆ ಸಂದರ್ಭದಲ್ಲಿ ಅನುರಾಧ ಅವರ ಅಯ್ಕೆಯನ್ನು ಕೆಲ ಮುಖಂಡರು ವಿರೋಧಿಸಿದ್ದರು. ಅಲ್ಲದೆ ಈ ವೇಳೆ ಕೆಲ ಮುಖಂಡರ ನಡುವೆ ತೀವ್ರ ವಾಗ್ದಾದ ಕೂಡ ನಡೆದಿತ್ತು ಎಂದು ಹೇಳಲಾಗುತ್ತಿದೆ.

ಶಾಸಕನ ಮೇಲೆ ಹಲ್ಲೆ ನಡೆಸಿದ್ದ ಕಟಾರಿ ಮೋಹನ್

ಪ್ರಸ್ತುತ ಹತ್ಯೆಗೀಡಾಗಿರುವ ಕಟಾರಿ ಅನುರಾಧ ಅವರ ಪತಿ ಕಟಾರಿ ಮೋಹನ್ ಈ ಹಿಂದೆ ಚಿತ್ತೂರು ಶಾಸಕ ಸಿಕೆ ಬಾಬು ಅವರ ಮೇಲೆ ಹಲ್ಲೆ ನಡೆಸಿದ್ದರು. ಇದೂ ಕೂಡ ದಾಳಿಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಬೆಂಗಳೂರಿನಿಂದ ಬಂದಿದ್ದ ಹಂತಕರು
ಘಟನಾ ಸ್ಥಳದಲ್ಲಿ ದೊರೆತ ಮಾರಕಾಸ್ತ್ರಗಳ ಆಧಾರದ ಮೇಲೆ ಹಂತಕರನ್ನು ಕರ್ನಾಟಕ ಅಥವಾ ತಮಿಳುನಾಡು ಮೂಲದವರೆಂದು ಶಂಕಿಸಲಾಗಿದೆ. ಪ್ರಮುಖವಾಗಿ ಹಂತಕರು ಬೆಂಗಳೂರಿನಿಂದ ಬಂದಿರಬಹುದು ಎಂದು ಶಂಕಿಸಲಾಗಿದೆ. ಹೀಗಾಗಿ ಚಿತ್ತೂರು ಜಿಲ್ಲೆಯಾದ್ಯಂತ ನಾಕಾಬಂದಿ ಹಾಕಲಾಗಿದ್ದು, ಚಿತ್ತೂರಿನಿಂದ ಹೊರಗೆ ಹೋಗುವ ಪ್ರತಿ ವಾಹನಗಳನ್ನು ಪರೀಕ್ಷಿಸಲಾಗುತ್ತಿದೆ. ಅಲ್ಲದೆ ಚಿತ್ತೂರಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಪೊಲೀಸರಿಗೆ ಶರಣಾದ ಹಂತಕರು..!
ಅತ್ತ ಅನುರಾಧ ಅವರನ್ನು ಹತ್ಯೆ ಮಾಡಿದ ದುಷ್ಕರ್ಮಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರೆ ಅತ್ತ ಇಬ್ಬರು ಶಂಕಿತ ಆರೋಪಿಗಳು ತಾವೇ ಅನುರಾಧ ಅವರನ್ನು  ಕೊಂದಿರುವುದಾಗಿ ಹೇಳಿ ಪೊಲೀಸರಲ್ಲಿ ಶರಣಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಅನುರಾಧ-ಮೋಹನ್ ದಂಪತಿ ಮೇಲೆ 4ರಿಂದ 6 ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ ಎಂದು  ಹೇಳಲಾಗುತ್ತಿದೆ. ಪ್ರಸ್ತುತ ಇಬ್ಬರು ಶಂಕಿತ ಆರೋಪಿಗಳು ಚಿತ್ತೂರಿನ ಒನ್ ಟೌನ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com