
ಮದುರೈ: ಹಿಂದು ಮಹಿಳೆ ಕ್ರಿಶ್ಚಿಯನ್ ಪುರುಷನನ್ನು ವಿವಾಹವಾದರೆ, ಇಬ್ಬರಲ್ಲಿ ಒಬ್ಬರು ಮತಾಂತರವಾಗಬೇಕು, ಒಂದು ವೇಳೆ ಮತಾಂತರವಾಗದೆ ಇದ್ದರೆ ಅಂತಹ ವಿವಾಹ ಮಾನ್ಯವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
ಮಹಿಳೆಯೊಬ್ಬರ ಪೋಷಕರು ಕೋರ್ಟ್ ಗೆ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್, ವಿವಾಹವಾಗಬೇಕಿರುವ ಪುರುಷ ಹಿಂದೂ ಧರ್ಮಕ್ಕೆ ಮತಾಂತರವಾಗಬೇಕು, ಇಲ್ಲವೇ ಮಹಿಳೆ ಕ್ರೈಸ್ತ ಮತಕ್ಕೆ ಮತಾಂತರವಾಗಬೇಕು ಇಲ್ಲವಾದರೆ ಅಂತಹ ವಿವಾಹಕ್ಕೆ ಮಾನ್ಯತೆ ಇರುವುದಿಲ್ಲ ಎಂದು ಹೇಳಿದೆ.
ತಮಿಳುನಾಡಿನ ಮಹಿಳೆಯೊಬ್ಬರು ಕ್ರೈಸ್ತ ಮತಕ್ಕೆ ಸೇರಿದ ಪುರುಷನನ್ನು ಪಳನಿಯ ದೇವಾಲಯದಲ್ಲಿ ವಿವಾಹವಾಗಿದ್ದರು. ಮಗಳು ಕಾಣೆಯಾಗಿರುವುದರಿಂದ ಯುವತಿಯ ಪೋಷಕರು ಕೋರ್ಟ್ ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಮಹಿಳೆಯ ಶೋಧ ನಡೆಸಿದ್ದ ಪೊಲೀಸರು ಅಂತರ್ಧಮೀಯ ವಿವಾಹವಾಗಿದ್ದ ಯುವತಿಯನ್ನು ಕೋರ್ಟ್ ಎದುರು ಹಾಜರುಪಡಿಸಿದ್ದರು.
ಪಳನಿಯಲ್ಲಿ ವಿವಾಹವಾಗಿದ್ದಾಗಿ ಹೇಳಿದ್ದ ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡ ಕೋರ್ಟ್, ವಿವಾಹವಾದ ವ್ಯಕ್ತಿ ಹಿಂದೂ ಧರ್ಮಕ್ಕೆ ಮತಾಂತರವಾಗದೇ ಈ ವಿವಾಹವನ್ನು ಹಿಂದೂ ವಿವಾಹ ಕಾಯ್ದೆಯಡಿ ಮಾನ್ಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ. ಒಂದೋ ಯುವತಿ ಕ್ರೈಸ್ತ ಮತಕ್ಕೆ ಮತಾಂತರ ಹೊಂದಬೇಕು ಇಲ್ಲದೇ ಇದ್ದರೆ ವಿವಾಹವಾಗಿರುವ ವ್ಯಕ್ತಿ ಹಿಂದು ಧರ್ಮಕ್ಕೆ ಮತಾಂತರವಾಗಬೇಕು, ಎರಡೂ ಆಗದೇ ಪ್ರತ್ಯೇಕವಾಗಿ ತಮ್ಮ ಧರ್ಮ ಪಾಲಿಸುವುದಿದ್ದರೆ 1954 ರ ವಿಶೇಷ ವಿವಾಹ ಕಾಯ್ದೆಯಡಿ ವಿವಾಹವನ್ನು ನೋಂದಾಯಿಸಬೇಕು ಎಂದು ಕೋರ್ಟ್ ಹೇಳಿದೆ.
Advertisement