
ಮುಂಬೈ: ರಾಯ್‌ಗಢ ಪೊಲೀಸರು ಶೀನಾ ಬೋರಾ ಹತ್ಯೆ ಪ್ರಕರಣವನ್ನು ಆರಂಭಿಕ ಹಂತದಲ್ಲಿಯೇ ಮುಚ್ಚಿಹಾಕಲು ಯತ್ನಿಸಿದ ಆರೋಪದ ಬಗ್ಗೆ ಹೊಸದಾಗಿ ವರದಿ ನೀಡುವಂತೆ ಮಹಾರಾಷ್ಟ್ರ ಸರ್ಕಾರ, ಪೊಲೀಸ್ ಮಹಾನಿರ್ದೇಶಕರಿಗೆ ಶನಿವಾರ ಸೂಚಿಸಿದೆ.
ಆರೋಪದ ಬಗ್ಗೆ ಈ ಹಿಂದೆ ಡಿಜಿಪಿಯಾಗಿದ್ದ ಸಂಜೀವ್ ದಯಾಳ್ ಅವರು ಸಲ್ಲಿಸಿದ್ದ ಒಂದು ಪುಟದ ವರದಿಯಿಂದ ಸಮಾಧಾನಗೊಳ್ಳದ ರಾಜ್ಯ ಗೃಹ ಇಲಾಖೆ, ಇಂದು ಹೊಸದಾಗಿ ವರದಿ ಸಲ್ಲಿಸುವಂತೆ ಡಿಜಿಪಿ ಪ್ರವೀಣ್ ದೀಕ್ಷಿತ್ ಅವರಿಗೆ ಸೂಚಿಸಿದೆ.
2012ರ ಮೇ 23ರಂದು ರಾಯ್‌ಗಢ ಅರಣ್ಯ ಪ್ರದೇಶದಲ್ಲಿ ಶೀನಾ ಬೋರಾ ಶವ ಪತ್ತೆಯಾಗಿತ್ತು. ಈ ಬಗ್ಗೆ ರಾಯ್‌ಗಢ ಪೊಲೀಸರು ಎಫ್‌ಐಆರ್ ಅಥವಾ ಎಡಿಆರ್ (ಆಕ್ಸಿಡೆಂಟಲ್ ಡೆತ್ ರಿಪೋರ್ಟ್) ಏಕೆ ದಾಖಲಿಸಲಿಲ್ಲ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಈ ಹಿಂದಿನ ಡಿಜಿಪಿ ಒಂದು ಪುಟದ ವರದಿ ಸಲ್ಲಿಸಿದ್ದರು. ಅದು ಸಮಾಧಾನಕರವಾಗಿಲ್ಲ. ಹೀಗಾಗಿ 15 ದಿನಗಳೊಳಗೆ ಹೊಸದಾಗಿ ವರದಿ ಸಲ್ಲಿಸುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ ಎಂದು ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಕೆ.ಪಿ. ಬಕ್ಷಿ ತಿಳಿಸಿದ್ದಾರೆ.
ಇನ್ನು ಪ್ರಕರಣ ಮುಚ್ಚಿಹಾಕುವ ಯತ್ನದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪಾತ್ರವಿದೆ ಎಂಬ ಮಾಧ್ಯಮಗಳ ವರದಿಯನ್ನು ಅಲ್ಲಗಳೆದ ಅವರು, ಆರೋಪವಿರುವ ಹಿರಿಯ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಹೆಚ್ಚಿನ ದಾಖಲೆಗಳ ಅಗತ್ಯವಿದೆ ಎಂದಿದ್ದಾರೆ.
Advertisement