
ಅಹಮದಾಬಾದ್: ಬಿಹಾರ ವಿಧಾನಸಭೆ ಚುನಾವಣೆ ಸೋಲನ್ನು ಮರೆತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಮನಸಾರೆ ಶ್ಲಾಘಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ, ಗುಜರಾತ್ ನ ಎಲ್ಲಾ ಆರು ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಖಂಡಿತವಾಗಿಯೂ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದಂತೆ ಗುಜರಾತ್ ನ ನಗರ ಪಾಲಿಕೆ ಚುನಾವಣೆಯಲ್ಲಿ ಕೂಡ ಗೆಲ್ಲುತ್ತದೆ ಎಂದು ಅಹಮದಾಬಾದ್ ನಲ್ಲಿ ಹೇಳಿಕೆ ನೀಡಿದ್ದಾರೆ.
ಗುಜರಾತ್ ನ ಆರು ನಗರ ಪಾಲಿಕೆಗಳಾದ ಅಹಮದಾಬಾದ್, ಸೂರತ್, ರಾಜ್ ಕೋಟ್, ವಡೋದರಾ, ಜಮ್ನಗರ್ ಮತ್ತು ಭಾವನಗರ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತವೆ.
ಇಂದಿನ ಚುನಾವಣೆ ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಪಾಟೀದಾರ್ ಸಮಾಜದ ಪ್ರತಿಭಟನೆ ಮೇಲೆಯೂ ಈ ಚುನಾವಣೆ ಫಲಿತಾಂಶ ಪ್ರಭಾವ ಬೀರಲಿದೆ.
ಬಿಹಾರ ವಿಧಾನಸಭೆ ಚುನಾವಣೆ ಮುಗಿದ ನಂತರ ನಡೆಯುತ್ತಿರುವ ಚುನಾವಣೆಯಾಗಿದೆ. ಬಿಹಾರದಲ್ಲಿ ಪಕ್ಷ ಸೋತ ನಂತರ ಬಿಜೆಪಿಯ ನಾಲ್ವರು ಹಿರಿಯ ನಾಯಕರು ಪತ್ರ ಬರೆದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಬಿಜೆಪಿಯ ನಾಯಕತ್ವ ಸರಿಯಾಗಿ ನಡೆದುಕೊಂಡು ಹೋಗುತ್ತಿಲ್ಲ ಎಂದು ಹೇಳಿದ್ದರು.
Advertisement