
ರಾಂಚಿ: ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಪ್ರೇಮಿಗಳಿಬ್ಬರನ್ನು ಗ್ರಾಮದ ಪಂಚಾಯ್ತಿಯ ಆಜ್ಞೆಯ ಮೇರೆಗೆ ಸ್ಥಳೀಯ ಗ್ರಾಮಸ್ಥರೇ ಹೊಡೆದು ಕೊಂದಿರುವ ಘಟನೆ ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ನಡೆದಿದೆ.
ಜಾರ್ಖಂಡ್ ಮೂಲದ ಮಹೇಂದ್ರ ಸಾಹು(50 ವರ್ಷ) ಮತ್ತು 25 ವರ್ಷದ ಯುವತಿ ಗ್ರಾಮಸ್ಥರಿಂದ ಕೊಲೆಗೀಡಾಗಿದ್ದು, ಇಬ್ಬರೂ ಅಕ್ರಮ ಸಂಬಂಧ ಹೊಂದಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಯುವತಿಯ ಮನೆಯಲ್ಲಿ ಯಾರೂ ಇಲ್ಲದಿರುವಾಗ ಆಕೆಯ ಮನೆಗೆ ಬರುತ್ತಿದ್ದ ಮಹೇಂದ್ರ ಸಾಹು ಯುವತಿಯೊಂದಿಗೆ ಸರಸಸಲ್ಲಾಪದಲ್ಲಿ ನಿರತನಾಗುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಯುವತಿ ಮನೆಯವರಿಗೂ ಕೂಡ ಮಾಹಿತಿ ಇತ್ತು. ಆದರೆ ಪ್ರತ್ಯಕ್ಷ ಸಾಕ್ಷಿಗಾಗಿ ಅವರು ಕಾಯುತ್ತಿದ್ದರು ಎಂದು ಹೇಳಲಾಗುತ್ತಿದೆ.
ಕಳೆದ ಶನಿವಾರವೂ ಕೂಡ ಯುವತಿಯ ಮನೆಯಲ್ಲಿ ಯಾರೂ ಇಲ್ಲದನ್ನು ಗಮನಿಸಿ ಮಹೇಂದ್ರ ಸಾಹು ಯುವತಿ ಮನೆಗೆ ಬಂದು ತನ್ನ ಶೃಂಗಾರ ಕಾರ್ಯ ಮುಂದುವರೆಸಿದ್ದಾಗ, ಕೂಡಲೇ ಮನೆಗೆ ನುಗ್ಗಿದ್ದ ಯುವತಿ ಮನೆಯವರು, ಇಬ್ಬರನ್ನೂ ಅಸಭ್ಯ ಭಂಗಿಯಲ್ಲಿ ಹಿಡಿದಿದ್ದಾರೆ. ಅಲ್ಲದೇ ಇಬ್ಬರನ್ನೂ ಅದೇ ಪರಿಸ್ಥಿತಿಯಲ್ಲಿ ಸ್ಥಳೀಯ ಗ್ರಾಮ ಪಂಚಾಯ್ತಿಗೆ ಒಪ್ಪಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ಪಂಚಾಯ್ತಿ ಮುಖ್ಯಸ್ಥರು ಇಬ್ಬರನ್ನು ಥಳಿಸುವಂತೆ ಆದೇಶಿಸಿದ್ದಾರೆ. ಪಂಚಾಯ್ತಿ ಆದೇಶ ಹೊರಬೀಳುತ್ತಿದ್ದಂತೆಯೇ ಕ್ರೋಧಗೊಂಡಿದ್ದ ಯುವತಿ ಸಂಬಂಧಿಕರು ಗ್ರಾಮಸ್ಥರೊಂದಿಗೆ ಸೇರಿ ಇಬ್ಬರನ್ನೂ ಮನಸೋ ಇಚ್ಛೆ ಥಳಿಸಿದ್ದಾರೆ.
ಗ್ರಾಮಸ್ಥರಿಂದ ತೀವ್ರ ಥಳಿತಕ್ಕೊಳಗಾದ ಪ್ರೇಮಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಸ್ತುತ ಯುವತಿಯ ಪೋಷಕರನ್ನು ಮತ್ತು ಸಂಬಂಧಿಕರನ್ನು ವಶಕ್ಕೆ ಪಡೆದಿದ್ದಾರೆ. ಇನ್ನು ಈ ಜೋಡಿಗಳ ಅಕ್ರಮ ಸಂಬಂಧದ ಕುರಿತು ನೆರೆಹೊರೆಯವರಿಗೆ ಮೊದಲೇ ಮಾಹಿತಿ ತಿಳಿದಿತ್ತು ಎನ್ನಲಾಗುತ್ತಿದ್ದು, ಯಾರೂ ಪೊಲೀಸರ ಮುಂದೆ ನಡೆದ ಘಟನೆಯ ಬಗ್ಗೆ ಬಾಯಿ ಬಿಡುತ್ತಿಲ್ಲ. ಅಲ್ಲದೇ ಜಮೀನು ವಿವಾದದ ಸಂಬಂಧ ಇಬ್ಬರ ಕೊಲೆ ನಡೆದಿದೆ ಎಂದು ಯುವತಿಯ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
Advertisement